ಪೂರ್ಣ ಬಹುಮತ ಬಂದರೆ ಕಾಡಾನೆ ಸಮಸ್ಯೆಗೆ ಮುಕ್ತಿ – ಮಾಜಿ ಮುಖ್ಯಮಂತ್ರಿಎಚ್. ಡಿ ಕುಮಾರಸ್ವಾಮಿ.
ಮೂರಕಣ್ಣು ಗುಡ್ಡದಲ್ಲಿ ಸೆಕ್ಷನ್ 4 ಹೆಸರಿನಲ್ಲಿ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ,
ಮಲೆನಾಡಿನ ಸಂಪೂರ್ಣ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದೇನೆ ಎಚ್. ಡಿ ಕುಮಾರಸ್ವಾಮಿ ಭರವಸೆ
ಸಕಲೇಶಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಂದರೆ ಮುಂದಿನ ವರ್ಷದ ಯುಗಾದಿಯೊಳಗೆ ಮಲೆನಾಡಿಗರನ್ನು ಕಾಡುತ್ತಿರುವ ಕಾಡುಪ್ರಾಣಿಗಳ ಹಾವಳಿ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಲಾಗಿದ್ದ 85 ನೇ ದಿನದ ಪಂಚರತ್ನರಥಯಾತ್ರೆ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಳೆದ ಮೂರು ನಾಲ್ಕು ವರ್ಷಗಳಿಂದ ಜೆಡಿಎಸ್ ಮುಳುಗಿದೆ ಎಂಬ ಅನ್ಯ ಪಕ್ಷಗಳ ಪ್ರಚಾರಕ್ಕೆ ಮರುಳಾಗಿ ರಾಜ್ಯದ ವಿವಿದೆಡೆ ನಮ್ಮ ಹಲವು ಶಾಸಕರು ಅನ್ಯ ಪಕ್ಷಗಳನ್ನು ಸೇರಿದ್ದಾರೆ. ಆದರೆ, ಪಂಚರಥ ಯಾತ್ರೆ ಆರಂಭವಾದ ನಂತರ ನಮಗೆ ಸಿಗುತ್ತಿರುವ ಅದ್ಬುತ ಸ್ವಾಗತ ಗಮನಿಸಿ ನಮ್ಮಲ್ಲಿಂದಲೇ ಹೊರಹೋದ ಮುಖಂಡರು ಮತ್ತೆ ಪಕ್ಷ ಸೇರಲು ಮುಗಿಬೀಳುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ದೀನ ದಲಿತರು,ಕಾರ್ಮಿಕರು,ಮಹಿಳೆಯರು ಹಾಗೂ ರೈತಾಪಿ ವರ್ಗ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಿರುವ ಯೋಜನೆಯನ್ನು ರೂಪಿಸಲಾಗುವುದು ಎಂದರು. ಜನಸಾಮಾನ್ಯರಿಗೆ ಅತಿ ಅಗತ್ಯವಿರುವ ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ, ರೈತ ಚೈತನ್ಯ ಗಳನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ವತಿಯಿಂದ ಪಂಚರತ್ನ ರಥಯಾತ್ರೆ ಮಾಡಲಾಗುತ್ತಿದೆ. ತಾಲೂಕಿನಲ್ಲಿರುವ ಕಾಡಾನೆ,ಒತ್ತುವರಿ ಸಮಸ್ಯೆ ಸೇರಿದಂತೆ ಬೆಳೆಗಾರರ ವಿವಿಧ ಸಮಸ್ಯೆಗಳ ಅರಿವು ನನಗೆ ಇದ್ದು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಲೆನಾಡಿನ ಸಂಪೂರ್ಣ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದೇನೆ. ತಾಲೂಕಿನ ಮೂರಕಣ್ಣು ಗುಡ್ಡದಲ್ಲಿ ಸೆಕ್ಷನ್ 4 ಹೆಸರಿನಲ್ಲಿ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ, 200 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಕಷ್ಟ ಅರಣ್ಯ ಇಲಾಖೆಗೆ ಏನು ಗೊತ್ತು, ಅರಣ್ಯ ಕಾಯಿದೆ ಬಂದ ಮೇಲೆ ಅರಣ್ಯ ನಾಶ ಹೆಚ್ಚಾಗಿದೆ. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸಲು ಸಂಪೂರ್ಣ ಬಹುಮತದ ಸರ್ಕಾರ ರಚಿಸಲು ನನಗೆ ಆಶೀರ್ವಾದ ಮಾಡಬೇಕು. ಅನ್ಯಪಕ್ಷಗಳೊಂದಿಗೆ ಭಾಗಿಯಾಗಿ ಅಲ್ವಾವಧಿ ಆಡಳಿತ ನಡೆಸಿದರೆ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ. ಐದು ವರ್ಷದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು, ಕೊಟ್ಟ ಬೇಡಿಕೆ ಈಡೇರಿಸದಿದ್ದರೆ ಮುಂದೆ ನಾನು ಪಕ್ಷವನ್ನೆ ವಿಸರ್ಜಿಸಲಿದ್ದೇನೆ. ನಾವು ಒಮ್ಮೆ ಬಹುಮತದ ಆಡಳಿತ ನಡೆಸಿದರೆ ಬಿಜೆಪಿ,ಕಾಂಗ್ರೆಸ್ ಪಕ್ಷಗಳು ರಾಜ್ಯದಿಂದಲೇ ಹೊರಹೋಗುವುದು ನಿಶ್ಚಿತ. ಈಗಾಗಲೇ ನನ್ನ ಅಲ್ಪಾವಧಿಯ ಆಡಳಿತದ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ರಾಜ್ಯದ ರೈತಾಪಿ ಜನರಿಗೆ ಸಾಲಮನ್ನಾ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ನೀಡಿದ್ದು ಜನಮಾನಸದಲ್ಲಿ ನೆಲೆಯಾಗಿದೆ. ನಮ್ಮ ಕಾರ್ಯಕರ್ತರಿಗೆ ಪಕ್ಷದ ಮೇಲಿನ ಪ್ರ್ರಾಮಾಣಿಕ ಕಾಳಜಿಯೆ ಇಂದಿಗೂ ಜೆಡಿಎಸ್ ಜೀವಂತವಾಗಿರಲು ಸಾಧ್ಯಯವಾಗಿದೆ. ಇದನ್ನು ಸಹಿಸಲಾಗದ ವಿರೋದ ಪಕ್ಷಗಳು ನಮ್ಮನ್ನು ಅಧಿಕಾರದಿಂದ ಕೆಳಿಗಿಳಿಸಲು ಯಶಸ್ವಿಯಾಗಿದೆ. ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೇರಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅನುಮಾನವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್, ಬೆಂಗಳೂರಿನ ಜೆಡಿಎಸ್ ಮುಖಂಡ ಅಂಜನಪ್ಪ, ಜೆಡಿಎಸ್ ರಾಜ್ಯ ಉಪಾಧ್ಯಾಕ್ಷ ಬಿ.ಎ ಜಗನ್ನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್ ಸೋಮಶೇಖರ್, ಪುರಸಭಾ ಅಧ್ಯಕ್ಷ ಕಾಡಪ್ಪ, ಜಿ.ಪಂ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಜಿ.ಪಂ ಮಾಜಿ ಉಪಾಧ್ಯಾಕ್ಷ ಸುಪ್ರದೀಪ್‌ತ್ ಯಜಮಾನ್, ಉಜ್ಮಾರುಜ್ವಿ, ಮುಖಂಡರಾದ ಸಚ್ಚಿನ್ ಪ್ರಸಾದ್, ತಮ್ಮಣ್ಣ ಗೌಡ,ಕವನ್ ಗೌಡ, ಅಸ್ಲಾಂ ಪಾಷಾ ಸೇರಿದಂತೆ ವಿವಿಧ ಗ್ರಾ.ಪಂ ಸದಸ್ಯರುಗಳು, ಪುರಸಭಾ ಸದಸ್ಯರುಗಳು ಹಾಜರಿದ್ದರು..