ಆಲೂರು : ತಾಲ್ಲೂಕಿನ ಕೇಂದ್ರ ಬಿಂದುವಾಗಿದ್ದ ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರುದ್ರೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ.ಪಿ.ರವಿಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಮೋಹನ್ ಕುಮಾರ್ ಹಾಗೂ ಬಿಜೆಪಿಯ ರುದ್ರೇಗೌಡ ನಾಮಪತ್ರ ಸಲ್ಲಿಸಿದ್ದರು.15 ಸದಸ್ಯರ ಬಲ ಹೊಂದಿರುವ ಬೈರಾಪುರ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 10 ಬಿಜೆಪಿ 3 ಹಾಗೂ ಕಾಂಗ್ರೆಸ್ 2 ಸದಸ್ಯರಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ಸದಸ್ಯರು ಹಾಜರಿದ್ದು ಬಿಜೆಪಿ ಬೆಂಬಲಿತ 3 ಜೆಡಿಎಸ್ ನ 4 ಹಾಗೂ ಕಾಂಗ್ರೆಸ್ 2 ಮತಗಳನ್ನು ಪಡೆದು ಬಿಜೆಪಿ ಬೆಂಬಲಿತ ರುದ್ರೇಗೌಡ ಅವರು 9 ಮತಗಳನ್ನು ಪಡೆದು ಗೆಲುವು ಪಡೆದರು ಜೆಡಿಎಸ್ 10 ಬೆಂಬಲಿತ ಸದಸ್ಯರನ್ನು ಹೊಂದಿದ್ದರು ಶಾಸಕ ಕುಮಾರಸ್ವಾಮಿ,ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ,ಚಂಚಲ ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತಗೆದುಕೊಂಡರು ಸಹ ಜೆಡಿಎಸ್ ನ ಮೋಹನ್ ಕುಮಾರ್ ಕೇವಲ 6 ಮತಗಳನ್ನು ಪಡೆಯುವುದರ ಮೂಲಕ ಚುನಾವಣಾ ಹೊತ್ತಲ್ಲಿ ಜೆಡಿಎಸ್ ಮುಖಭಂಗ ಅನುಭವಿಸುವಂತಾಯಿತು.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಆಲೂರು ತಾಲ್ಲೂಕು ಪಂಚಾಯಿತಿ ಇಓ ಡಾ.ನಾರಾಯಣಸ್ವಾಮಿ ಚುನಾವಣಾಧಿಕಾರಿಯಾಗಿ ರುದ್ರೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಆಲೂರು-ಸಕಲೇಶಪುರ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ನಂತರ ಗ್ರಾಮ ಪಂಚಾಯಿತಿ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ರುದ್ರೇಗೌಡ ಮಾತನಾಡಿ ಜೆಡಿಎಸ್ ಬೆಂಬಲಿತ ಕೆಲವು ಸದಸ್ಯರು ನನಗೆ ಮತ ನೀಡಿದ್ದರಿಂದ ಗೆಲುವು ಸುಲಭವಾಯಿತು ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದರು.En
ಬಿಜೆಪಿ ಹಿರಿಯ ಮುಖಂಡ ಅಜಿತ್ ಚಿಕ್ಕಣಗಾಲು ಮಾತನಾಡಿ ಜೆಡಿಎಸ್ ದುರಾಡಳಿತಕ್ಕೆ ಬೇಸತ್ತು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿದ್ದಾರೆ ಇದು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಗಣೇಶ್,ನಂಜುಂಡಪ್ಪ,ಬಿಜೆಪಿ ಮುಖಂಡ ಕಣಗಾಲ್ ಲೋಕೇಶ್,ಅಜಿತ್,ಹನುಮಂತೇಗೌಡ,ಆರ್.ಕೆ.ರವಿ,ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.