ತಿರುವನಂತಪುರ: ವಾಮಾಚಾರಕ್ಕಾಗಿ ಮಹಿಳೆಯರಿಬ್ಬರನ್ನು ಬಲಿ ಕೊಟ್ಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಕೇರಳ ಪೊಲೀಸರು ಮಂಗಳವಾರ (ಅ.11) ಬಂಧಿಸಿದ್ದು, ಇದೀಗ ತನಿಖೆಯಲ್ಲಿ ಇನ್ನಷ್ಟು ಭಯಾನಕ ಸಂಗತಿಗಳು ಹೊರಬೀಳುತ್ತಿವೆ.
ಇದೀಗ ಬಂದಿರುವ ಮಾಹಿತಿ ಪ್ರಕಾರ ವಯಸ್ಕರ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿ, ಮಹಿಳೆಯರಿಬ್ಬರನ್ನು ಕರೆದೊಯ್ದು ನರ ಬಲಿ ನೀಡಲಾಗಿದೆ. ಈ ಪ್ರಕರಣ ಇಡೀ ಕೇರಳವನ್ನೇ ಬೆಚ್ಚಿ ಬೀಳಿಸಿದ್ದು, ತನಿಖೆಯಿಂದ ಸಾಕಷ್ಟು ಭಯಾನಕ ಸಂಗತಿಗಳು ಹೊರಬರುತ್ತಿವೆ. ಬಲಿಯಾದ ಪದ್ಮಾ ಎಂಬಾಕೆ ಆರೋಪಿ ಮುಹಮ್ಮದ್ ಶಫಿಯ ವಾಹನದಲ್ಲಿ ಹೋಗುತ್ತಿರುವ ಸಿಸಿಟಿವಿ ದೃಶ್ಯವೇ ಇಡೀ ಪ್ರಕರಣ ಬೆಳಕಿಗೆ ಬರಲು ಮುಖ್ಯ ಕಾರಣ ಎಂದು ತಿಳಿದುಬಂದಿದೆ.
ವಯಸ್ಕರ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಪದ್ಮಾಗೆ ಆಮಿಷ ಒಡ್ಡಿ ಪತ್ತನಂತಿಟ್ಟ ಜಿಲ್ಲೆಯ ಎಳಂತೂರಿನ ಮನೆಗೆ ಕರೆದುಕೊಂಡು ಹೋಗಿದ್ದಾಗಿ ಆರೋಪಿ ಶಫಿ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಮನೆಗೆ ಕರೆದುಕೊಂಡು ಹೋದ ನಂತರ ಆರೋಪಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಮೇಲೆ ಪ್ರಭಾವ ಬೀರಿದ ಶಫಿ, ಪದ್ಮಾಳನ್ನು ಕೊಲೆ ಮಾಡಿ, ಆಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಹೂತಿಡಲಾಗಿತ್ತು.
ಆರೋಪಿ ಶಫಿಯನ್ನು ರಶೀದ್ ಎಂತಲೂ ಕರೆಯಲಾಗುತ್ತಿತ್ತು. ಈತ ಆರೋಪಿ ದಂಪತಿಗೆ ಮಾಂತ್ರಿಕನಂತೆ ಪೋಸ್ ನೀಡಿದ್ದನು ಮತ್ತು ನರಬಲಿ ಮಾಡಿದರೆ ಅಪಾರ ಸಂಪತ್ತು ಪಡೆಯಬಹುದು ಎಂದು ಹೇಳಿದ್ದ. ಶಫಿಯ ಮಾತು ನಂಬಿ ಆತನಿಗೆ ಒಂದೂವರೆ ಲಕ್ಷ ರೂಪಾಯಿ ಶುಲ್ಕವನ್ನು ದಂಪತಿ ಪಾವತಿಸಿದ್ದರು. ಹಣಕಾಸಿನ ತೊಂದರೆಯಿಂದ ಹೊರಬರಬಂದು, ಆರ್ಥಿಕ ಏಳಿಗೆ ಸಾಧಿಸಬಹುದೆಂಬ ಆಸೆಗೆ ಬಿದ್ದು ದಂಪತಿ ಈ ಕೃತ್ಯ ಎಸಗಿದ್ದಾರೆ.
ಈಗ ಬಂಧನದಲ್ಲಿರುವ ಮೂವರು ಆರೋಪಿಗಳು ಈ ವರ್ಷದ ಜೂನ್‌ನಲ್ಲಿ ರೋಸೆಲಿನ್ ಎಂಬ ಇನ್ನೊಬ್ಬ ಮಹಿಳೆಯನ್ನು ಕೊಂದು ನರಬಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರು ಮಹಿಳೆಯರ ಚೂರುಚೂರು ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಗಳು ಮೃತದೇಹಗಳ ಕೆಲವು ಭಾಗಗಳನ್ನು ಸೇವಿಸುವ ಮೂಲಕ ನರಭಕ್ಷಕತೆಯಲ್ಲಿ ತೊಡಗಿದ್ದಾರೆ ಎಂಬ ಭಯಾನಕ ಸಂಗತಿಯು ಕೂಡ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ದಂಪತಿ ಕೊಲೆ ಮಾಡುವ ಮುನ್ನ ಶಫಿ ಸಂತ್ರಸ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಈ ಮೂವರನ್ನು ಸೈಕೋಪಾತ್‌ಗಳೆಂದು ಹೆಸರಿಸಲಾಗಿದೆ. ಈ ಆರೋಪಿಗಳು ಇಂತಹ ಹೆಚ್ಚಿನ ಕೊಲೆಗಳು ಮತ್ತು ಇತರ ಅಪರಾಧಗಳನ್ನು ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ