ಸಕಲೇಶಪುರ: ದೊಡ್ಡನಾಗರ ಗ್ರಾಮದಲ್ಲಿನ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ದೊಡ್ಡನಾಗರ ನಿವೇಶನ ರಹಿತರ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.
ತಾಲೂಕಿನ ದೊಡ್ಡನಾಗರ ಗ್ರಾಮದಲ್ಲಿ ನಿವೇಶನ ರಹಿತರ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಹೋರಾಟದ ಕುರಿತು ದೊಡ್ಡನಾಗರ ಗ್ರಾಮಸ್ಥ ಹಾಗೂ ಬಿರಡಹಳ್ಳಿ ಗ್ರಾ.ಪಂ ಸದಸ್ಯ ದೇವರಾಜ್ ಮಾತನಾಡಿ ತಾಲೂಕಿನ ದೊಡ್ಡನಾಗರ ಗ್ರಾಮದಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗ ಸೇರಿದಂತೆ ಇತರೆ ಜಾತಿಗಳ 120ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದಲ್ಲಿ ನೆಲೆಸಿದ್ದು, ಬಹುತೇಕ ಕುಟುಂಬಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದೆ. ಬಹುತೇಕ ಕುಟುಂಬಗಳು ನಿವೇಶನರಹಿತರಾಗಿದ್ದು ಅಲ್ಲದೆ ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೆ ಗ್ರಾಮದಲ್ಲಿರುವ ಸರ್ವೆ ನಂ 44,45, ಮತ್ತು 96ರಲ್ಲಿ ಅರಣ್ಯ ಇಲಾಖೆಯ ಒತ್ತುವರಿ ಜಾಗವನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ನಿವೇಶನದ ಹಕ್ಕು ಪತ್ರ ನೀಡುವವರೆಗೂ ತಾತ್ಕಾಲಿಕವಾಗಿ ಹಾಕಲಾಗಿರುವ ಟೆಂಟ್‌ಗಳಲ್ಲಿ ವಾಸವಿರುತ್ತೇವೆ ಎಂದರು.
ಸ್ಥಳಕ್ಕೆ ತಹಶೀಲ್ದಾರ್ ಮೇಘನಾ, ವಲಯ ಅರಣ್ಯಾಧಿಕಾರಿ ಶಿಲ್ಪಾ ಭೇಟಿ ನೀಡಿ ಟೆಂಟ್‌ಗಳನ್ನು ತೆರವುಗೊಳಿಸಲು ಮನವಿ ಮಾಡಿದರು ಹಾಗೂ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ನಿವೇಶನ ಹಂಚಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು ಬಗ್ಗದ ಗ್ರಾಮಸ್ಥರು ನಿವೇಶನ ಹಂಚುವ ಖಚಿತ ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸತ್ಯಾಗ್ರಹ ಮುಂದುವರೆಸಿದ್ದಾರೆ.
ಪ್ರತಿಭಟನೆಯಲ್ಲಿ ರಂಗನಾಥ್, ಹರೀಶ್, ಮಕ್ಸೂರ್ ಪಾಷಾ, ಸಂದೀಪ್, ಬಸವರಾಜ್, ಗಿರೀಶ್, ನಿಂಗರಾಜ್, ಮೋಹನ್, ಕಾಂತರಾಜ್ ಮತ್ತಿತರರು ಹಾಜರಿದ್ದರು.