ಸುಂದರೇಶ್ ಮೃತ ದೇಹ ಮಧ್ಯಾಹ್ನ 1:30ಕ್ಕೆ ಸಕಲೇಶಪುರಕ್ಕೆ ಆಗಮನ.
ಅರಣ್ಯ ಇಲಾಖೆಯ ಕಚೇರಿ ಬಳಿ ಸಕಲ ಸರ್ಕಾರಿ ಗೌರವದೊಂದಿಗೆ ಶ್ರದ್ದಾಂಜಲಿ ಸಲ್ಲಿಸಲು ತಯಾರಿ.
ತೀರ್ಥಹಳ್ಳಿಯಲ್ಲಿ ಸಂಜೆ 5:30 ಒಳಗೆ ಅಂತ್ಯ ಸಂಸ್ಕಾರ ನೆರೆವೇರಿಸುವ ಹಿನ್ನೆಲೆ ಪಾರ್ಥಿವ ಶರೀರ ತರಲು ಸಿಗ್ನಲ್ ಫ್ರೀ ಮಾಡಿಕೊಟ್ಟಿರುವ ಬೆಂಗಳೂರು ಪೊಲೀಸರು
ಹಾಸನದಿಂದ ಟ್ರಾಫಿಕ್ ಸಮಸ್ಯೆ ಆಗದಂತೆ ಸಾರ್ವಜನಿಕರು ಸಹಕರಿಸುವಂತೆ ಮನವಿ.
ಸಕಲೇಶಪುರ : ಕಾಡ್ಗಿಚ್ಚಿನಿಂದ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟ ಅರಣ್ಯ ರಕ್ಷಕ ಸುಂದರೇಶ್ ಅವರ ಮೃತ ದೇಹ ಇಂದು ಮಧ್ಯಾಹ್ನ ಸಕಲೇಶಪುರದ ಅರಣ್ಯ ಇಲಾಖೆಯ ಕಚೇರಿಗೆ ತರಲಾಗುವುದು ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಕಚೇರಿ ಮುಂಭಾಗವೇ ಮೃತ ಸುಂದರೇಶ್ ಅವರಿಗೆ ಇಲಾಖೆ ವತಿಯಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲು ಈಗಾಗಲೇ ತಯಾರಿ ನಡೆದಿದೆ.
ಮೃತ ಸುಂದರೇಶ್ ಅವರ ಮರಣೋತ್ತರ ಪರೀಕ್ಷೆ ತಡವಾಗುತ್ತಿದೆ, ಅರಣ್ಯ ರಕ್ಷಕ ಸುಂದರೇಶ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಂಪಿಗೆಸರ ಗ್ರಾಮದವರಾಗಿದ್ದು ಸಂಜೆ ವೇಳೆಗೆ ಮೃತ ದೇಹ ಸ್ವಗ್ರಾಮ ತಲುಪಿ ಅಂತ್ಯ ಸಂಸ್ಕಾರ ನೆರವೇರಿಸಬೇಕಿದೆ ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಾಕಷ್ಟು ಶ್ರಮವಹಿಸಿದೆ.
ಈ ಹಿಂದೆ ನೇರವಾಗಿ ತೀರ್ಥಹಳ್ಳಿಗೆ ಕೊಂಡೊಯ್ಯುವುದಾಗಿ ಮಾಹಿತಿ ತಿಳಿದು ಬಂದಿತ್ತು ಆದರೆ ತಾಲೂಕಿನ ಸಾರ್ವಜನಿಕರು ಹಾಗೂ ಸಮಾಜ ಸೇವಕ ಸಾಗರ್ ಜಾನೇಕೆರೆ ರವರ ಒತ್ತಾಯದ ಮೇರೆಗೆ ಪಾರ್ಥಿವ ಶರೀರವನ್ನು ಮಧ್ಯಾಹ್ನದ ವೇಳೆಗೆ ಸಕಲೇಶಪುರಕ್ಕೆ ತಂದು ನಂತರ ತೀರ್ಥಹಳ್ಳಿಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಕಲ ಸರ್ಕಾರಿ ಗೌರವ ನೀಡಲು ಸಜ್ಜಾಗಿದೆ.
ಬೆಂಗಳೂರಿನಿಂದ ತೀರ್ಥಹಳ್ಳಿ ತಲುಪಲು 6 ಗಂಟೆಗಳ ಕಾಲಾವಕಾಶ ಬೇಕಾಗಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನೋಡಿಕೊಂಡು ಸಹಕರಿಸಬೇಕಾಗಿ ಕುಟುಂಬಸ್ಥರು ಹಾಗೂ ಇಲಾಖೆ ಮನವಿ ಮಾಡಿದೆ.