ನಾನು ಜೆಡಿಎಸ್ ಬಿಡಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ; ಊಹಾಪೋಹಗಳಿಗೆ ತೆರೆ ಎಳೆದ ಶಾಸಕ ಎಚ್. ಕೆ ಕುಮಾರಸ್ವಾಮಿ.
ವದಂತಿಗಳಿಗೆ ಕಿವಿಗೊಡದಂತೆ ಕಾರ್ಯಕರ್ತರಿಗೆ ಮನವಿ ಮಾಡಿದ ಚಂಚಲ ಕುಮಾರಸ್ವಾಮಿ.
ಸಕಲೇಶಪುರ : ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ. ನಾನು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದ ಶಾಸಕ. ಈ ಅವಧಿ ಮುಗಿಯುವವರೆಗೆ ನಾನು ಪ್ರಾಮಾಣಿಕವಾಗಿ ಇರುವುದು ನನ್ನ ಕರ್ತವ್ಯ. ನಮ್ಮ ಏಳಿಗೆ ಸಹಿಸದ ಕೆಲವರು ಊಹಾಪೋಹಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಕಿಡಿಕಾರಿದರು.
ಕೆಲ ದಿನಗಳ ಹಿಂದೆ ಜೆಡಿಎಸ್ ಶಾಸಕ ಎಚ್ ಕೆ ಕುಮಾರಸ್ವಾಮಿ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ , ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಗುರುವಾರ ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿದ ಶಾಸಕರು, “ಯಾರೋ ಸ್ವಂತ ಹಿತಾಸಕ್ತಿಗೆ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ನಾನು ಹಿರಿಯ ರಾಜಕಾರಣಿ . ನಾನು ರಾಜಕಾರಣದಲ್ಲಿ ಅನೇಕ ಏರಿಳಿತಗಳನ್ನ ನೋಡಿದ್ದೇನೆ. ಇವೆಲ್ಲ ಸಂಪೂರ್ಣ ಊಹಾಪೋಹ. ಜೆಡಿಎಸ್ ಬಿಡುವ ಪ್ರಶ್ನೆ ಇಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ,” ಎಂದರು. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಮಾತನಾಡಿ ದೇವೇಗೌಡರ ಕುಟುಂಬದ ಜೊತೆಗೆ ನಮಗೆ ಆತ್ಮೀಯ ಸಂಬಂಧವಿದ್ದು, ಪಕ್ಷ ತೊರೆಯುವ ಯಾವ ಚಿಂತನೆಯೂ ಇಲ್ಲ, ಜೆಡಿಎಸ್ ಪಕ್ಷ ನಮಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿದೆ. ಉಂಡ ಮನೆಗೆ ದ್ರೋಹ ಬಗೆಯುವ ನೀತಿ ನಮ್ಮದಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ನಿರ್ಮಾಣವಾಗಿದೆ. ಈ ಗೊಂದಲವನ್ನು ಜೆಡಿಎಸ್ ಪಕ್ಷದ ಮೇಲೆ ಉಳಿಸಲು ಕೆಲವರು ಈ ರೀತಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ .ಇದಕ್ಕೆ ಕಾರ್ಯಕರ್ತರು ಕಿವಿಗೊಡುವ ಅವಶ್ಯಕತೆ ಇಲ್ಲ. ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದ್ದು ಮುಂಬರುವ ಚುನಾವಣೆಯಲ್ಲಿ ಗೆಲುವು ನಮ್ಮದಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇತರೆ ಪಕ್ಷಗಳು ಸೋಲಿನ ಭೀತಿಯಿಂದ ನಮ್ಮ ಮೇಲೆ ಜನರಿಗೆ ಗೊಂದಲ ವಾತಾವರಣ ನಿರ್ಮಿಸಲು 6 ಬಾರಿ ಶಾಸಕರಾಗಿರುವ ಎಚ್ ಕೆ ಕುಮಾರಸ್ವಾಮಿ ಅವರು ಬಿಜೆಪಿ ಬಿಡುತ್ತಾರೆ ಎಂಬ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಹಬ್ಬಿಸುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ ಎಂದು ವಿರೋಧಿಗಳಿಗೆ ಚಾಟಿ ಬೀಸಿದರು.