ಸಕಲೇಶಪುರ: ಸಕಲೇಶಪುರ ಪಟ್ಟಣದ ಮಹೇಶ್ವರಿ ನಗರಕ್ಕೆ ಸೇರುವ ಸುಮಾರು 9 ಎಕರೆ ವಿಸ್ತೀರ್ಣದ ಹಿಂದೂ ರುದ್ರಭೂಮಿ ಅಕ್ಷರಶಃ ಕಸದ ತೊಟ್ಟಿಯಂತೆ ಮಾರ್ಪಾಡು ಆಗಿದೆ. ಇಲ್ಲಿ ಶವ ಸಂಸ್ಕಾರಕ್ಕೆ ಬರುವ ಸಾರ್ವಜನಿಕರಿಗೆ ನಿಜಕ್ಕೂ ನರಕ ಯಾತನೆ ಆಗಿದೆ. ಒಂದೆಡೆ ತಮ್ಮವರು ಅಗಲಿದ ದುಃಖ ಇನ್ನೊಂದೆಡೆಯಲ್ಲಿ ಕೋಳಿ ಮಾಂಸದ ತ್ಯಾಜ್ಯದ ವಾಸನೆಯಿಂದ ನರಳುವಂತಹ ಪರಿಸ್ಥಿತಿ ಎದುರಾಗಿದೆ.
ನಗರದ ಆಜಾದ್ ರಸ್ತೆಯಲ್ಲಿರುವ ಕೋಳಿ ಅಂಗಡಿಗಳ ತ್ಯಾಜ್ಯ, ಮೀನಿನ ತ್ಯಾಜ್ಯವನ್ನು ನೇರವಾಗಿ ಹೇಮಾವತಿ ನದಿತೀರಕ್ಕೆ ಪುರಸಭೆಯ ಮುಖ್ಯಾಧಿಕಾರಿಗಳು ತಂದು ಸುರಿಯಲು ಅನವು ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡಲು ನೇರ ಹೊಣೆ ಆಗಿರುತ್ತಾರೆ. ಈಗಾಗಲೇ ತಂದು ಸುರಿದ ತ್ಯಾಜ್ಯದಲ್ಲಿ ಹುಳಗಳು, ಕೀಟಗಳ ಉಪಟಳ ಹೆಚ್ಚುತ್ತಿದ್ದು ಮಹೇಶ್ವರಿನಗರದ ನಿವಾಸಿಗಳು ಮತ್ತು ರುದ್ರಭೂಮಿಯ ಸುತ್ತಮುತ್ತ ವಾಸಿಸುತ್ತಿರುವ ಜನರಿಗೆ ಸಾಂಕ್ರಾಮಿಕ ರೋಗಗಳು ಕಟ್ಟಿಟ್ಟ ಬುತ್ತಿಯಂತೆ ಗೋಚರವಾಗುತ್ತಿದೆ.
ಈ ಹಿಂದೆ ಹಲವು ಬಾರಿ ಇಲ್ಲಿನ ಗೇಟ್ ಗೆ ಬೀಗ ಹಾಕಿ ಕಸ ಹಾಕದಂತೆ ತಡೆದರು ಬೇಲಿಯೇ ಎದ್ದು ಹೊಲ ಮೇಯ್ದಂತೆ ಪುರಸಭಾ ಮುಖ್ಯಾಧಿಕಾರಿಗಳ ಕುಮ್ಮಿಕಿನಿಂದ ರುದ್ರಭೂಮಿಯ ಬೀಗ ಹೊಡೆದು ಸಕಲೇಶಪುರದ ಕೋಳಿ, ಮೀನಿನ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯವನ್ನು ನೇರವಾಗಿ ರುದ್ರಭೂಮಿಗೆ ತಂದು ಸುರಿದು ಉದ್ಧಟತನ ಮೆರೆದಿದ್ದಾರೆ. ಈ ತ್ಯಾಜ್ಯಗಳು ನೇರವಾಗಿ ಸಕಲೇಶಪುರದ ಜೀವನಾಡಿ ಹೇಮಾವತಿ ನದಿಗೆ ಸೇರುತ್ತಿದ್ದು ನದಿಯನ್ನು ಕಲುಷಿತಗೊಳಿಸಿ ಕುಡಿಯುವ ನೀರಿಗೂ ಹಾಹಾಕಾರ ಬಂದೊದಗುವ ಪರಿಸ್ಥಿತಿ ಎದುರಾಗಿದೆ.
ಇದರ ಬಗ್ಗೆ ಕೂಡಲೇ ಸೂಕ್ತ ಪರಿಹಾರ ದೊರೆಯಬೇಕು. ತಾಲ್ಲೂಕು ಆಡಳಿತ ಇದರ ಬಗ್ಗೆ ಕೂಡಲೇ ಗಮನ ಹರಿಸಿ ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ಎಲ್ಲಾ ಸಮಸ್ಯೆಗೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳೆ ನೇರ ಕಾರಣವಾಗಿದ್ದು ಕೂಡಲೇ ಈ ಸಮಸ್ಯೆ ಬಗೆಹರಿಸದಿದ್ದರೆ ಸ್ಥಳೀಯ ನಿವಾಸಿಗಳೊಂದಿಗೆ ಹಾಗು ವಿವಿಧ ಸಂಘಟನೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಮಾರಮ್ಮ ದೇವಸ್ಥಾನದ ಕಾರ್ಯದರ್ಶಿ ಮೋಹನ್ ಕುಮಾರ್, ಎಚ್ಚರಿಕೆ ನೀಡಿದ್ದಾರೆ