ಸಕಲೇಶಪುರ : ಅನ್ನಭಾಗ್ಯ ಯೋಜನೆಯಲ್ಲಿ ಪ್ಲಾಸ್ಟಿಕ್ ರೀತಿಯ ಅಕ್ಕಿ ಪೂರೈಕೆ: ರಾಜೇಂದ್ರಪುರ ಗ್ರಾಮಸ್ಥರ ಆತಂಕ
ನ್ಯಾಯ ಬೆಲೆ ಅಂಗಡಿಯಿಂದ ತಂದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಇದ್ಯಂತೆ, ನೀವು ಗಮನಿಸಿದ್ದೀರಾ, ನಮ್ಮ ಮನೆಯಲ್ಲೂ ಊದಿಕೊಂಡ ಅಕ್ಕಿ ತೇಲುತ್ತಿತ್ತು. ಪ್ಲಾಸ್ಟಿಕ್ ಯಾರಾದ್ರೂ ತಿಂತಾರಾ? ಹಾಗಾದರೆ, ಈ ಅನ್ನ ತಿನ್ನೋದು ಬೇಡವಾ? ಅಯ್ಯೋ ನಮಗೆ ಈ ಅಕ್ಕಿನೇ ಬೇಡ…” ಇಂಥ ಹತ್ತಾರು ಮಾತುಗಳು, ಆತಂಕಕ್ಕೆ ಕಾರಣ ಜನರಲ್ಲಿ ಮಾಹಿತಿಯ ಕೊರತೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜೇಂದ್ರಪುರ ಗ್ರಾಮದಲ್ಲಿ ಜನರು ಇಂಥದ್ದೇ ಆತಂಕದಲ್ಲಿ ಪಡಿತರ ಅಕ್ಕಿಯ ಬಳಕೆಯ ಬಗ್ಗೆ ಹೆದರಿದ್ದಾರೆ. ಸಾರವರ್ಧಿತ ಅಕ್ಕಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಗ್ರಾಮಸ್ಥರಲ್ಲಿ ಇನ್ನೂ ಇಂಥ ಗೊಂದಲ ಮುಂದುವರಿದಿದೆ.
ಅಡುಗೆ ಮಾಡುವಾಗ ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿದೆ ಎಂದು ಗ್ರಾಮಸ್ಥರು ಗಾಬರಿಗೊಂಡಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಡೀ ಗ್ರಾಮದಲ್ಲಿ ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆತಿದೆ ಎಂದು ಅನ್ನ ಮಾಡಿ ತಿನ್ನಲು ಗ್ರಾಮಸ್ಥರು ಹೆದರುತ್ತಿದ್ದಾರೆ.
ಅನ್ನ ಊಟ ಮಾಡಿದ ಕೆಲ ಮಕ್ಕಳಲ್ಲಿ ಕಾಕಾತಾಳೀಯ ಎಂಬಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಆಗ್ರಹಿಸಿದ್ದಾರೆ.
ಈ ಮಧ್ಯೆ ಪ್ಲಾಸ್ಟಿಕ್ ಅಕ್ಕಿ ಆನಾರೋಗ್ಯ ತರುತ್ತಿದೆ ಎಂದು ಕೆಲವರು ಹೊಸ ಅಕ್ಕಿಯ ಅನ್ನ ಮಾಡದೆ ಹಾಗೇ ಬಿಟ್ಟಿದ್ದಾರೆ. ಆದರೆ ಈ ರೀತಿ ಪಡಿತರ ಅಕ್ಕಿಯಲ್ಲಿ ಬರುವ ಪ್ಲಾಸ್ಟಿಕ್ ಅಕ್ಕಿ ಎಂದು ಕರೆಯುವ ಅಕ್ಕಿ ಪ್ಲಾಸ್ಟಿಕ್ ಅಲ್ಲಾ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಬಂದಿತ್ತು. ಅಲ್ಲದೆ ಸಾರ್ವಜನಿಕರಿಗೆ ಪೌಷ್ಟಿಕಾಂಶದ ಕೊರತೆ ಇರುವ ಕಾರಣ ಇಲಾಖೆ ಈ ರೀತಿಯ ಅಕ್ಕಿ ಪೂರೈಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.