ಕಳ್ಳತನ ಪ್ರಕರಣ : ವ್ಯಕ್ತಿಗೆ ಮಾರಣಾಂತಿಕ ಹಲ್ಲೆ : ಐವರ ಬಂಧನ
ಕಳ್ಳತನ ಆರೋಪದಡಿ ವ್ಯಕ್ತಿಯೊರ್ವನಿಗೆ ಹಗ್ಗದಲ್ಲಿ ಕೈ ಕಾಲು ಕಟ್ಟಿ ಮಾರಾಣಾಂತಿಕ ಹಲ್ಲೆ ಮಾಡಿರುವುದರ ಜೊತೆ ನಾಯಿಬಿಟ್ಟು ಕಚ್ಚಿಸಿರುವ ಅಮಾನವೀಯ ಘಟನೆ ಬೇಲೂರು ತಾಲೂಕಿನ, ಅರೇಹಳ್ಳಿ ಹೋಬಳಿ ಬೆಳ್ಳಾವರ ಗ್ರಾಮದಲ್ಲಿ ನಡೆದಿದೆ
ಕಿತ್ತಾವರ ಗ್ರಾಮದ ಮಂಜು ಹಲ್ಲೆಗೊಳಗಾದ ವ್ಯಕ್ತಿ. ಈತ ಬೆಳ್ಳಾವರ ಗ್ರಾಮದಲ್ಲಿ ಕಾಫಿ ಕಳ್ಳತನ ಮಾಡುತ್ತಿದ್ದ ಎಂದು ಪಾಪಣ್ಣ ಮತ್ತು ಅವರ ಸ್ನೇಹಿತರು ಹಿಗ್ಗಾಮಗ್ಗಾ ಥಳಿಸಿದ್ದಾರೆ. ಹಲ್ಲೆಯಿಂದ ಮಂಜುಗೆ ಗಂಭೀರಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದ ತಕ್ಷಣ ಅರೇಹಳ್ಳಿ ಪೊಲೀಸರು ಹಲ್ಲೆ ಮಾಡಿದವರನ್ನು ಈಗಾಗಲೇ ಬಂಧಿಸಿ ಹಲ್ಲೆಗೊಳಗಾದ ವ್ಯಕ್ತಿಯ ಸಂಬಂಧಿಕರು ನೀಡಿರುವ ದೂರಿನ್ವಯ ವಿಚಾರಣೆ ನಡೆಸಿ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ಈ ಪ್ರಕರಣ ಒಂದು ರೀತಿ ನೈತಿಕ ಪೊಲೀಸ್ಗಿರಿಯಾಗಿದೆ. ತಪ್ಪು ಮಾಡಿದರೆ ಹತ್ತಿರ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸಬೇಕು. ಆದರೆ ಇವರೇ ಕಾನೂನು ಕೈಗೊಂಡು ದಲಿತ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಗಂಗಾಧರ್ ಬಹುಜನ್ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅರೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಾವರ ಗ್ರಾಮದಲ್ಲಿ ಮಂಜು ಎಂಬುವರು ತೋಟದಲ್ಲಿ ಕಾಫಿ ಕದ್ದಿರುವುದನ್ನು ಪ್ರಶ್ನಿಸಿ ಹಲ್ಲೆ ನಡೆಸಿದ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಮಂಜು ಅವರಿಗೆ ಐದು ಮಂದಿ ಸೇರಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬೆಳಿಗ್ಗೆಯಿಂದ ಹರಿದಾಡು ತಿದ್ದು ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಐವರ ವಿರುದ್ಧ ಎಸ್ ಸಿ ಎಸ್ ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾಗಿ ತಿಳಿಸಿದ್ದಾರೆ.
ಹಲ್ಲೆ ನಡೆಸಿದ ಬೆಳ್ಳಾವರ ಗ್ರಾಮದ ಕೆ.ಪಿ ರಾಘವೇಂದ್ರ (40 ) ಉಮೇಶ್ (36), ಮಲ್ಲಿಗಾನೂರು ಗ್ರಾಮದ ಕೀರ್ತಿ (31), ಡೋಲನ ಮನೆಯ ಶಾಮ್ರಲ್ (43), ಕಿತ್ತಾವರ ಗ್ರಾಮದ ನವೀನ್ ರಾಜ್ (36)ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.