ಜೆಡಿಎಸ್ ನಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ; ಮಾಜಿ ಸಚಿವ ಎಚ್.ಡಿ ರೇವಣ್ಣ
ಸಕಲೇಶಪುರ: ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಕೊಟ್ಟಿರುವ ಕೊಡುಗೆಯನ್ನು ಬೇರೆ ಯಾವುದೇ ಪಕ್ಷಗಳು ಕೊಟ್ಟಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಹಾಸನ ಜಿಲ್ಲೆಗೆ ರಾಷ್ಟ್ರೀಯ ಪಕ್ಷಗಳು ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ, ಶಿಕ್ಷಣಕ್ಕೆ ಜೆಡಿಎಸ್ ಒತ್ತು ಕೊಟ್ಟಿದ್ದರಿಂದ ಹಲವಾರು ಶಾಲೆಗಳು, ಪ್ರಥಮ ದರ್ಜೆ ಕಾಲೇಜುಗಳು, ಐಟಿಐ ,ಡಿಪ್ಲೋಮಾ ಕಾಲೇಜುಗಳು ರಾಜ್ಯದಾದ್ಯಂತ ಪ್ರಾರಂಭವಾದವು.ನಾನು ವಿದ್ಯುತ್ ಮಂತ್ರಿಯಾದಾಗ ಒಮ್ಮೆಯು ದರ ಏರಿಸಲಿಲ್ಲ, 200 ಯೂನಿಟ್ ಉಚಿತ ವಿದ್ಯುತ್ ಕೊಡೊ ಭರವಸೆಯನ್ನು ಕಾಂಗ್ರೆಸ್ ನೀಡಿರುವುದು ಸುಳ್ಳಿನ ಭರವಸೆಯಾಗಿದೆ. 200 ಯೂನಿಟ್ ಉಚಿತ ವಿದ್ಯುತ್ ನೀಡಿದರೆ 9000 ಕೋಟಿ ಪ್ರತಿವರ್ಷ ನಷ್ಟವಾಗುತ್ತದೆ ಎಂದು ಖುದ್ದು ವಿದ್ಯುತ್ ಮಂತ್ರಿ ಹೇಳಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳು ಯಾವುದೆ ಅಭಿವೃದ್ಧಿ ಮಾಡದೆ ರಾಜ್ಯವನ್ನು ಕೊಳ್ಳೆ ಹೊಡೆದಿದೆ. ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದೆ ಜೆಡಿಎಸ್ ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಿರಸ್ಕರಿಸಿ ಜೆಡಿಎಸ್ ನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.
ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ ರೈತರ ಪರ ಇರುವ ಏಕೈಕ ಪಕ್ಷವೆಂದರೆ ಜೆಡಿಎಸ್ ಪಕ್ಷವಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮರ್ಯಾದೆ ಇಲ್ಲ ಏಕೆಂದರೆ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿ ಮುಗಿಸಲು ಸಾಧ್ಯವಾಗುತ್ತಿಲ್ಲ.ಎತ್ತಿನಹೊಳೆ ಯೋಜನೆಯ ಯಾವುದೆ ಸಂಬಂದವಿಲ್ಲದಿದ್ದರು ಸುಮಾರು 9 ಕೋಟಿ ಹಾಸನ ಕ್ಷೇತ್ರಕ್ಕೆ ಕೊಡಲಾಗಿದ್ದು, ನಮ್ಮ ಕ್ಷೇತ್ರಕ್ಕೆ 2 ಕೋಟಿ ರೂ ನೀಡಲಾಗಿದೆ.ಅಭಿವೃದ್ಧಿಗೆ ನೀಡಲಾಗುತ್ತಿರುವ ಹಣದಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರವಾಗಿದ್ದು ಇನ್ನು ಕಾಂಗ್ರೆಸ್ ನಿಂದ ಯಾವುದೇ ಹೊಸತನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಕ್ಷೇತ್ರದಲ್ಲಿ ಹಲವಾರು ಕೋಟಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾರ್ಯಕರ್ತರು ಜೆಡಿಎಸ್ ಗೆಲ್ಲಿಸಲು ಮುಂದಾಗಬೇಕೆಂದು ಹೇಳಿ ಕೆಲ ಕಾಲ ಗದ್ದಿತರಾದರು.
ಈ ಸಂಧರ್ಭದಲ್ಲಿ ಹಲವು ಕಾರ್ಯಕರ್ತರು ಚುನಾವಣೆ ಕುರಿತು ಅಭಿಪ್ರಾಯ ನೀಡಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್ ಸೋಮಶೇಖರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜಗನ್ನಾಥ್, ಪುರಸಭಾ ಅಧ್ಯಕ್ಷ ಕಾಡಪ್ಪ,ಮಾಜಿ ಜಿಪಂ ಸದಸ್ಯರುಗಳಾದ ಚಂಚಲಾ ಕುಮಾರಸ್ವಾಮಿ, ಉಜ್ಮಾ ರುಜ್ವಿ, ಸುಲೋಚನಾ ರಾಮಕೃಷ್ಣ, ಪಕ್ಷದ ಮುಖಂಡರುಗಳಾದ ಸತೀಶ್ ಶೆಟ್ಟಿ,ಜಾತಹಳ್ಳಿ ಪುಟ್ಟಸ್ವಾಮಿ, ತಮ್ಮಣ್ಣ, ಬೆಕ್ಕನಹಳ್ಳಿ ನಾಗರಾಜ್, ಕವನ್ ಗೌಡ,ಪುರಸಭಾ ಸದಸ್ಯರುಗಳಾದ ಪ್ರಜ್ವಲ್, ಜ್ಯೋತಿ, ಉಮೇಶ್,ಆದರ್ಶ, ಮುಂತಾದವರು ಹಾಜರಿದ್ದರು.