2022ನೇ ಸಾಲಿನ ಜಮಾ ಮತ್ತು ಖರ್ಚು ಲೆಕ್ಕಪತ್ರದ ವರದಿ ನೀಡಲು ಪುರಸಭಾ ಮುಖ್ಯಾಧಿಕಾರಿ ಹಿಂದೇಟು,
ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ವಿರುದ್ದ ಕರವೇ ಸ್ವಾಭಿಮಾನಿ ಸೇನೆಯ ಸಾಗರ್ ಜಾನೇಕೆರೆ ಆಕ್ರೋಶ.
ಮಾಧ್ಯಮದವರ ದಿಕ್ಕು ತಪ್ಪಿಸುತ್ತಿರುವ ಪುರಸಭಾ ಮುಖ್ಯಧಿಕಾರಿ.
ಸಕಲೇಶಪುರ : 2022 ರ ವಿವಿಧ ತಿಂಗಳುಗಳ ಪುರಸಭೆಯ ಖರ್ಚುವೆಚ್ಚದ ವಿವರವನ್ನು ಮಾಹಿತಿ ಹಕ್ಕಿನಡಿಯಲ್ಲಿ ವರದಿ ಕೇಳಿದ್ದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಸಾಗರ್ ಜಾನೇಕೆರೆ ಅವರಿಗೆ ಪುರಸಭಾ ಮುಖ್ಯಾಧಿಕಾರಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರ ವಿರುದ್ದ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.
2022 ಸಾಲಿನ ಮೇ, ಜೂನ್, ಜುಲೈ ,ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನ ಜಮಾ ಮತ್ತು ಖರ್ಚು ವೆಚ್ಚದ ದೃಢೀಕರಣ ಪತ್ರವನ್ನು ಮಾಹಿತಿ ಹಕ್ಕಿನಡಿಯಲ್ಲಿ ಸಾಗರ್ ಜಾನೆಕೆರೆ ಕೇಳಿದ್ದರು.
ಇದಕ್ಕೆ ಉತ್ತರವಾಗಿ ಪುರಸಭೆ ಕಡೆಯಿಂದ ಮುಂದಿನ ಸಾಮಾನ್ಯ ಸಭೆ ನಡೆದ ನಂತರ ನೀಡಲಾಗುವುದು ಎಂದು ಉತ್ತರಿಸಿದ್ದಾರೆ ಆದರೆ ಕಳೆದ ಆರು ತಿಂಗಳುಗಳಿಂದ ಪುರಸಭೆ ಸಾಮಾನ್ಯ ಸಭೆಗಳು ನಡೆದಿಲ್ಲವೆ…..?ಎಂದು ಸಾಗರ್ ಅವರು ಪ್ರಶ್ನಿಸಿದ್ದಾರೆ.
ಸಂಘಟನೆಯ ಆರೋಪದ ಹಿನ್ನೆಲೆಯಲ್ಲಿ ವಾಸ್ತವ ನ್ಯೂಸ್ ಪುರಸಭಾ ಮುಖ್ಯ ಅಧಿಕಾರಿಯನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಲು ಬಯಸಿದಾಗ ಮುಖ್ಯ ಅಧಿಕಾರಿ ಮಂಜುನಾಥ್ ರವರು ಇದುವರೆಗೂ ವಿಶೇಷ ಹಾಗೂ ತುರ್ತು ಸಭೆಗಳು ಮಾತ್ರ ನಡೆದಿದೆ ಸಾಮಾನ್ಯ ಸಭೆ ನಡೆದಿಲ್ಲ ಎಂದಿದ್ದಾರೆ. ಸಾಮಾನ್ಯ ಸಭೆ ಏಕೆ ನಡೆದಿಲ್ಲ ಎಂದು ಪ್ರಶ್ನಿಸಿದ ಪತ್ರಕರ್ತರಿಗೆ ಸೂಕ್ತ ಉತ್ತರ ನೀಡುವಲ್ಲಿ ಮಂಜುನಾಥ್ ವಿಫಲರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪುರಸಭೆಯಿಂದ ಸೂಕ್ತ ಉತ್ತರ ಸಿಗದಿದ್ದರೆ ಮಾಹಿತಿ ಹಕ್ಕಿನಡಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಸಾಗರ್ ಎಚ್ಚರಿಕೆ ನೀಡಿದ್ದಾರೆ.