ಕರಾಚಿ: ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ನಿತ್ಯವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಪರಿಣಾಮ ಸಾಮನ್ಯ ಅಗತ್ಯ ವಸ್ತುಗಳನ್ನು ಖರೀದಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಾಕಿಸ್ತಾನದಲ್ಲಿ ಈರುಳ್ಳಿಯ ಬೆಲೆ 501% ಪಟ್ಟು ಏರಿಕೆಯಾಗಿದೆ. 2022ರ ಜನವರಿ 6 ರಂದು ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಒಂದು ಕೆ.ಜಿ.ಗೆ 36.7 ರೂ. ಇತ್ತು. ಈ 2023ರ ಜನವರಿ 5 ರಂದು ಒಂದು ಕೆ.ಜಿ ಈರುಳ್ಳಿ 220.4 ರೂಪಾಯಿಗೆ ಮಾರಾಟವಾಗುತ್ತಿದೆ.
ಪಾಕಿಸ್ತಾನದಲ್ಲಿ ಇಂಧನದ ಬೆಲೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಡೀಸೆಲ್ ಬೆಲೆ 61 ರಷ್ಟು ಹೆಚ್ಚಾಗಿದ್ದರೆ, ಪೆಟ್ರೋಲ್ ಬೆಲೆ 48 ರಷ್ಟು ಏರಿಕೆಯಾಗಿದೆ. ಧವಸ ಧಾನ್ಯಗಳಾದ ಅಕ್ಕಿ, ಬೇಳೆಕಾಳು, ಗೋಧಿ ಬೆಲೆಯು ಒಂದು ವರ್ಷದಲ್ಲಿ ಸುಮಾರು 50 ಪ್ರತಿ ಶತದಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ವರದಿಯ ಪ್ರಕಾರ, ಡಿಸೆಂಬರ್ 2021 ರಲ್ಲಿ ಶೇಕಡಾ 12.3ರಷ್ಟಿದ್ದ ಹಣದುಬ್ಬರ ಡಿಸೆಂಬರ್ 2022 ರಲ್ಲಿ ಶೇಕಡಾ 24.5 ಕ್ಕೆ ದ್ವಿಗುಣಗೊಂಡಿದೆ. ಬೆಲೆ ಏರಿಕೆ ಹೆಚ್ಚಾಗಿ ಅಗತ್ಯ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಉಂಟಾಗಿದೆ.