ಹಾವೇರಿ: ಏಲಕ್ಕಿ ನಾಡು ಹಾವೇರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಮ್ಮೇಳನ ನಡೆಯುವ ಮುಖ್ಯ ವೇದಿಕೆ ಎದುರು ಧ್ವಜಾರೋಹಣ ನೆರವೇರಿಸಲಾಯಿತು.
ಹಾವೇರಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಯಿತು. ಭುವನೇಶ್ವರಿ ತಾಯಿಯ ಪ್ರತಿಮೆಗೆ ಆರತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಅವರು ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಸೇರಿ ಹಲವರು ಭಾಗಿಯಾಗಿದ್ದಾರೆ. ಮೆರವಣಿಗೆಗೆ 120 ಜಾನಪದ ಕಲಾ ತಂಡಗಳು ಮೆರಗು ನೀಡಿವೆ. ಹಾವೇರಿಯ ಹುಕ್ಕೇರಿ ಮಠದಿಂದ ಮೆರವಣಿಗೆ ಆರಂಭವಾಗಿದ್ದು, ನಗರದ ಐತಿಹಾಸಿಕ ಪುಸಿದ್ದೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳಳ ವೇದಿಕೆವರೆಗೆ ಮೆರವಣಿಗೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾದ್ಯಕ್ಷ ದೊಡ್ಡ ರಂಗೇಗೌಡ, ಹಾವೇರಿಗೆ ಪವಿತ್ರ ಯೋಗ ಇದೆ. ನೀವು-ನಾವು ಎಲ್ಲರೂ ಸಂಭ್ರಮಿಸುವ ಕ್ಷಣವಿದು. ಇಲ್ಲಿನ ಜನ, ಸಂಸ್ಕೃತಿ ನನ್ನ ಮೇಲೆ ಪ್ರಭಾವ ಬೀರಿದೆ. ಸಮ್ಮೇಳನವನ್ನು ಜಾತ್ರೆ ಅಂತ ಹೇಳ್ತಾ ಇದಾರೆ. ಸಾಹಿತಿಗಳ ಸಮ್ಮಿಲನ ಇದು. ನೆಲ ಜಲ ಭಾಷೆ ವಿಚಾರವಾಗಿ ಈ ಸಮ್ಮೇಳನ ಪ್ರಭಾವ ಬೀರಲಿದೆ ಎಂದರು