ಸಕಲೇಶಪುರ : ವಡೂರು ಗ್ರಾಮದಲ್ಲಿ ರೈತ ಆತ್ಮಹತ್ಯೆ
ಸಾಲದ ಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡೂರು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಹೊನ್ನಪ್ಪ (58)ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ.
ರೈತ ಹೊನ್ನಪ್ಪ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 3 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆದಿದ್ದರು ಹಾಗೂ ಸ್ಥಳೀಯವಾಗಿ 8 ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಕಾಫಿ, ಮೆಣಸು ಹಾಗೂ ಅಡಿಕೆ ಸೇರಿದಂತೆ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದರು ಆದರೆ ಇತ್ತೀಚಿಗೆ ಬಿದ್ದ ಅಕಾಲಿಕ ಮಳೆಯಿಂದ ಕಾಫಿ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು ಮತ್ತೊಂದೆಡೆ ಕಾಡಾನೆ ಹಾವಳಿಯಿಂದ ಭತ್ತ ಬೆಳೆಯುವುದನ್ನು ನಿಲ್ಲಿಸಿದರು. ಇತ್ತೀಚಿಗಷ್ಟೇ ಸಾಲವನ್ನು ತೀರಿಸುವಂತೆ ಬ್ಯಾಂಕಿನಿಂದ ನೋಟಿಸ್ ನೀಡಲಾಗಿತ್ತು ಇದರಿಂದ ಸಾಲಕ್ಕೆ ಹೆದರಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.