ಸಕಲೇಶಪುರ: ಜಿಲ್ಲಾ ಪಂಚಾಯತ್ ಹಾಸನ ಹಾಗೂ ತಾಲ್ಲೂಕು ಪಂಚಾಯಿತಿ ಸಕಲೇಶಪುರ ಇವರ ವತಿಯಿಂದ ಪಟ್ಟಣದ ಸುಭಾಷ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಮಟ್ಟದ ಕಬ್ಬಡ್ಡಿ ಹಾಗೂ ಖೋಖೋ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಿದ ನಂತರ ತಾ.ಪಂ ಕಾರ್ಯನಿವಾರ್ಹಕ ಅಧಿಕಾರಿ ವೆಂಕಟೇಶ್ ಮಾತನಾಡಿ ಪ್ರತಿಯೋರ್ವರಿಗೂ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರತಿಭೆಯಿರುತ್ತದೆ. ಆದರೆ ಆ ಪ್ರತಿಭೆಯನ್ನು ಹೊರಹಾಕಲು ಅವಕಾಶವಿಲ್ಲದ ಕಾರಣ ಹಲವು ಪ್ರತಿಭೆಗಳು ಕಮರಿ ಹೋಗುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಸರ್ಕಾರ ಗ್ರಾಮೀಣ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದೆ ಎಂದರು.
ತಾ.ಪಂ ಸಹಾಯಕ ನಿರ್ದೇಶಕ ಹರೀಶ್ ಮಾತನಾಡಿ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ದೃಷ್ಠಿಯಿಂದ ಈ ವರ್ಷ ಕಬಡ್ಡಿ ಹಾಗೂ ಖೋಖೋ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕ್ರೀಡೆಗಳನ್ನು ಸೇರಿಸಲಾಗುತ್ತದೆ ಎಂದರು.
ತಾಲೂಕಿನ ಹೊಸೂರು ತಂಡ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದರೆ ಹೆತ್ತೂರು ತಂಡ ದ್ವಿತೀಯಾ ಸ್ಥಾನ ಪಡೆಯಿತು. ಖೋಖೋದಲ್ಲಿ ಹೆತ್ತೂರು ತಂಡ ಪ್ರಥಮ ಹಾಗೂ ಆನೆಮಹಲ್ ತಂಡ ದ್ವಿತೀಯಾ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ನೌಕರರ ಸಂಘದ ಅಧ್ಯಕ್ಷ ಸುರೇಶ್, ಆನೆಮಹಲ್ ಗ್ರಾ.ಪಂ ಅಧ್ಯಕ್ಷ ಅಶ್ರಫ್, ಬಿರಡಹಳ್ಳಿ ಪಿಡಿಓ ಗಿರೀಶ್ ಸೇರಿದಂತೆ ವಿವಿಧ ಗ್ರಾ.ಪಂಗಳ ಪಿಡಿಓಗಳು ಹಾಜರಿದ್ದರು.