ಸಕಲೇಶಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಆರಕ್ಷಕ ವೃತ್ತ ನಿರೀಕ್ಷಕರ ಮನೆ ಪಾಳು ಬಿದ್ದಿದ್ದು ಕೋಟ್ಯಾಂತರ ರೂ ಬೆಳೆ ಬಾಳುವ ನಿವೇಶನ ಯಾರ ಉಪಯೋಗಕ್ಕೂ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು ಮಂಗಳೂರು ನಡುವಿನ ಹೆದ್ದಾರಿಯ ಬದಿ ಪಟ್ಟಣದ ಹೃದಯ ಭಾಗದಲ್ಲಿ ಪೋಲಿಸ್ ಇಲಾಖೆಯ ಆರಕ್ಷಕ ವೃತ್ತ ನಿರೀಕ್ಷಕರಿಗಾಗಿ ಮನೆಯೊಂದನ್ನು ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಈ ಮನೆಯಲ್ಲಿ ಯಾರು ವಾಸ ಮಾಡಲು ಬರದ ಕಾರಣ ಮನೆ ಸಂರ್ಪೂಣವಾಗಿ ಪಾಳು ಬಿದ್ದಿದೆ. ಈ ಹಿಂದೆ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಗುರುರಾಜ್‌ರವರು ಇದೇ ಮನೆಯನ್ನು ದುರಸ್ಥಿ ಮಾಡಿಕೊಂಡು ವಾಸವಿದ್ದರು. ಅವರು ವರ್ಗಾವಣೆಗೊಂಡ ನಂತರ ಸರಿಸುಮಾರು ಏಳೆಂಟು ವರ್ಷಗಳಿಂದ ಈ ಮನೆಯಲ್ಲಿ ವಾಸವಿರಲು ಯಾರು ಮುಂದಾಗಿಲ್ಲ ಇದರಿಂದಾಗಿ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು ಹಾವು, ಚೇಳುಗಳ ತಂಗುದಾಣವಾಗಿದೆ. ಕಟ್ಟಡದ ಬಾಗಿಲು ತೆರೆದಿದ್ದು ಅನೈತಿಕ ಚಟುವಟಿಕೆಗಳ ತಂಗುದಾಣವಾಗುವ ಸಾಧ್ಯತೆಯಿದೆ. ಒಂದು ರೀತಿಯಲ್ಲಿ ಭೂತದ ಬಂಗ್ಲೆಯಾದಾಂತಾಗಿದ್ದು ಸುಮಾರು 5 ಗುಂಟೆಗೂ ಹೆಚ್ಚು ಜಾಗ ಇಲ್ಲಿದ್ದರು ಸಹ ಯಾವುದೆ ಪ್ರಯೋಜನಕ್ಕೆ ಬಾರದಂತಾಗಿದೆ. ಪೋಲಿಸರಿಗಾಗಿ ಡಿ.ವೈ.ಎಸ್.ಪಿ ಕಚೇರಿ ಹಿಂದೆ ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗಿದ್ದು ಬಹುತೇಕ ಪೋಲಿಸರ ಕುಟುಂಬಗಳು ಅಲ್ಲೆ ವಾಸವಿದೆ. ಪೋಲಿಸ್ ಕುಟುಂಬಗಳ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಭವನದ ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ ಇಲ್ಲೊಂದು ಪೋಲಿಸ್ ಭವನದ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಬಹುತೇಕ ಪೋಲಿಸರು ಅಭಿಪ್ರಾಯಪಡುತ್ತಿದ್ದಾರೆ. ಅಲ್ಲದೆ ಇಲ್ಲೊಂದು ಭವನ ನಿರ್ಮಾಣಗೊಂಡರೆ ಪೋಲಿಸರಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಸಹ ಅನುಕೂಲವಾಗುತ್ತದೆ. ಭವನ ನಿರ್ಮಾಣವಾಗುವವರೆಗೂ ಕನಿಷ್ಠ ಇಲ್ಲಿ ಸ್ವಚ್ಚತೆ ಕಾರ್ಯ ನಡೆಸಬೇಕಾಗಿದೆ. ಇದರಿಂದ ಪೋಲಿಸ್ ಇಲಾಖೆಗೆ ಆದಾಯ ಸಹ ಬರುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕ ಅಧಿಕಾರಿಯೆಂದು ಹೆಸರುವಾಸಿಯಾಗಿರುವ ಎ.ಎಸ್.ಪಿ ಮಿಥುನ್ ಕೂಡಲೆ ಇತ್ತ ಗಮನವರಿಸಿದರೆ ಈ ಜಾಗದಲ್ಲಿ ಪೋಲಿಸ್ ಭವನ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ.
ಹೇಳಿಕೆ: ಮಿಥುನ್, ಎ.ಎಸ್.ಪಿ: ಆರಕ್ಷಕ ವೃತ್ತ ನಿರೀಕ್ಷಕರ ನಿವಾಸ ಪಾಳು ಬಿದ್ದಿರುವುದು ಇದೀಗ ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಪೋಲಿಸ್ ಭವನ ನಿರ್ಮಾಣ ಮಾಡಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.