ಸಕಲೇಶಪುರ: ವಿಶೇಷ ಚೇತನರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು ಜವಾಬ್ದಾರಿಯುತ ಸರ್ಕಾರಿ ನೌಕರರ ಕರ್ತವ್ಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಅನುಪಮ ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ತಾಲೂಕು ವಿಕಲಚೇತನ ಒಕ್ಕೂಟ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಪಟ್ಟಣದ ಲಯನ್ಸ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸರ್ಕಾರದಿಂದ ವಿಶೇಷ ಚೇತನರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಅದರ ಸದ್ಬಳಕೆಯನ್ನು ಪ್ರತಿಯೋರ್ವ ವಿಕಲಚೇತನರು ಮಾಡಿಕೊಳ್ಳಬೇಕೆಂದು ಹೇಳಿದರು.
ತಾಲೂಕು ವಿಕಲಚೇತನರ ಒಕ್ಕೂಟ ಸಮಿತಿ ಅಧ್ಯಕ್ಷ ಯೋಗೇಶ್ ಪ್ರತಿವರ್ಷದಂತೆ ಈ ವರ್ಷವು ಸಹ ಅದ್ದೂರಿಯಾಗಿ ವಿಶೇಷ ಚೇತನರ ದಿನಾಚರಣೆ ಆಚರಿಸಲಾಗುತ್ತಿದೆ. ವಿಕಲ ಚೇತನರಿಗೆ ಭವನದ ಅವಶ್ಯಕತೆ ಯಿದ್ದು ಇದಕ್ಕೆ ಪುರಸಭೆ ವತಿಯಿಂದ ಸೂಕ್ತ ನಿವೇಶನ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಚೇತನರು ಸಂಭ್ರಮದಿಂದ ಭಾಗಿಯಾದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಹಾರ್ಲೆ ಗಣಪಯ್ಯ ಕಿವುಡು ಮತ್ತು ಮೂಕರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಲಯನ್ಸ್ ಸಂಸ್ಥೆ ವತಿಯಿಂದ ಅಂಗವಿಕಲರೋರ್ವರಿಗೆ ವಿಶೇಷ ವ್ಹೀಲ್ ಚೇರ್ ನೀಡಲಾಯಿತು.
ಈ ಸಂಧರ್ಭದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ, ವಕೀಲ ಆನಂದ್, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಖಾದರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈಭೀಮ್ ಮಂಜು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಸ್ತೂರಿ ಮುಂತಾದವರು ಹಾಜರಿದ್ದರು.