ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ಮುಖ್ಯಮಂತ್ರಿ ಸಮ್ಮತಿ ವಿಚಾರ
ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಅಭಿನಂದನೆ ಸಲ್ಲಿಕೆ.
ಸಕಲೇಶಪುರ : ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರ ಪರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮ ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ ಮುಂದೆ ಕೂಡ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಹಾರಕ್ಕೆ ಮುಂದಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಹಾಸನ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾನವ ಜೀವ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ. ಗಳಿಗೆ, ಶಾಶ್ವತ ಅಂಗವಿಕಲತೆಗೆ ನೀಡುವ ಪರಿಹಾರವನ್ನು 5 ಲಕ್ಷ ರೂ. ಗಳಿಂದ 10 ಲಕ್ಷ ರೂ. ಗಳಿಗೆ, ಭಾಗಶಃ ಅಂಗವಿಕಲತೆಗೆ ನೀಡುವ ಪರಿಹಾರವನ್ನು 2.5 ಲಕ್ಷ ರೂ. ಗಳಿಂದ 5 ಲಕ್ಷ ರೂ.ಗಳಿಗೆ, ಗಾಯಗೊಂಡವರಿಗೆ ನೀಡುವ ಪರಿಹಾರ ಮೊತ್ತ 30 ಸಾವಿರ ರೂ. ಗಳಿಂದ 60 ಸಾವಿರ ರೂ. ಗಳಿಗೆ, ಆಸ್ತಿ ಹಾನಿಗೆ ಪರಿಹಾರ ಮೊತ್ತ 10 ಸಾವಿರ ರೂ. ಗಳಿಂದ 20 ಸಾವಿರ ರೂ. ಗಳಿಗೆ ಹಾಗೂ ಜೀವ ಹಾನಿ ಅಥವಾ ಶಾಶ್ವತ ಅಂಗವಿಕಲತೆಯ ಪ್ರಕರಣಗಳಿಗೆ ನೀಡುವ ಕುಟುಂಬ ಮಾಸಾಶನದ ಮೊತ್ತ ಮಾಸಿಕ ರೂ. 2,000 ದಿಂದ 4,000 ರೂ. ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಯಿತು. ಇದಲ್ಲದೆ ಬೆಳೆಹಾನಿಗೆ ನೀಡುತ್ತಿರುವ ಪರಿಹಾರವನ್ನೂ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.