ಸಕಲೇಶಪುರ : ತಾಲ್ಲೂಕಿನ ಜನರನ್ನು ಕಾಡುತ್ತಿರುವ ಆನೆ, ಕಾಡುಕೋಣ ಸೇರಿದಂತೆ ವನ್ಯಜೀವಿ ಉಪಟಳವನ್ನು ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿ ಭಾರತೀಯ ಕಮ್ಯೂನಿಸ್ಟ್ ಪಾರ್ಟಿಯ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಗೂ ಆರಕಲಗೋಡು ತಾಲೂಕುಗಳಲ್ಲಿ ಆನೆ-ಮಾನವ ಸಂಘರ್ಷವು ತಾರಕಕ್ಕೇರುತ್ತಿದೆ. ಆನೆ-ಮಾನವ ಸಂಘರ್ಷದಲ್ಲಿ ಈಗಾಗಲೇ 75ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಹಾಗೂ ಕೆಲ ಆನೆಗಳೂ ಕೂಡ ಸಾವನ್ನಪ್ಪಿದ್ದಾನೆ. ಈ ಸಮಸ್ಯೆಯ ಜೊತೆಯಲ್ಲೇ ಸಕಲೇಶಪುರ ಹಾಗೂ ಆಲೂರು ತಾಲೂಕುಗಳಲ್ಲಿ ಕಾಡುಕೋಣಗಳ (ಕಾಟೆಗಳ) ಹಾವಳಿಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾನವ ಮತ್ತು ವನ್ಯಜೀವಿಗಳ ನಡುವಿನ ಈ ಸಂಘರ್ಷವು ಅಲ್ಪ ಕಾಲದಲ್ಲಿ ಅಂತ್ಯ ಕಾಣುವ ಯಾವುದೇ ಭರವಸೆಗಳು ಕಾಣಿಸುತ್ತಿಲ್ಲ.
ಕರ್ನಾಟಕ ರಾಜ್ಯದಲ್ಲಿ ಈ ಆನೆ-ಮಾನವ ಸಂಘರ್ಷಕ್ಕೆ ಒಂದು ಶಾಶ್ವತ ಪರಿಹಾರವನ್ನು ಕಂಡು ಹಿಡಿವ ಉದ್ದೇಶದಿಂದ ದಶಕಗಳ ಹಿಂದೆಯೇ ಕಾರ್ಯಪಡೆಯೊಂದನ್ನು ನಿರ್ಮಿಸಲಾಗಿತ್ತು. ಈ ಕಾರ್ಯಪಡೆಯಿಂದ 2010ರಲ್ಲಿ ಒಂದು ಬಹಳ ವಿಸೃತವಾದ, ವೈಜ್ಞಾನಿಕವಾದ ವರದಿಯನ್ನು ಸರ್ಕಾರದ ಮುಂದಿಡಲಾಗಿತ್ತು. ಆದರೆ ಈ ವರದಿಯನ್ನು ಎಲ್ಲ ಸರ್ಕಾರಗಳೂ ಉಪೇಕ್ಷಿಸಿದರ ಕಾರಣವಾಗಿ ಈಗ ಪರಿಸ್ಥಿತಿಯು ಮಾನವ ಹಾಗೂ ವನ್ಯಜೀವಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಆ ವರದಿಯಲ್ಲಿ ತಿಳಿಸಿದ್ದ ಅನೇಕ ಅಂಶಗಳು ಸರ್ಕಾರಗಳ ವಿಳಂಬ ನೀತಿಗಳಿಂದ ಅಪ್ರಸ್ತುತವಾಗಿರುವ ಸಾಧ್ಯತೆಗಳೂ ಇರುವುದರಿಂದ ಆ ವರದಿಯನ್ನು ಪುನರ್ ಪರಿಶೀಲನೆಯ ಅಗತ್ಯವೂ ಅವಶ್ಯಕವಾಗಿದೆ ಎಂದರು. ನಾಲ್ಕೂ ತಾಲೂಕುಗಳಲ್ಲಿ ಮಾನವ ಜೀವಗಳು ಬೆಳೆಗಳು ನಪ್ಪವಾಗಿವೆ. ಜನರು ದಿನನಿತ್ಯ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಆನೆ ದಾಳಿಗೆ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರವು 7.50 ಲಕ್ಷ ರೂ.ಗಳನ್ನು ನೀಡುತ್ತದೆ ಆದರೆ ಆನೆಯ ಕೈಗೆ ಸಿಲುಕಿ ಸಂಪೂರ್ಣ ಅಂಗವಿಕಲರಾದವರಿಗೆ ಅಥವ ಭಾಗಶ: ಅಂಗವಿಕಲರಾದವರಿಗೆ ಪರಿಹಾರ ನೀಡುತ್ತಿಲ್ಲ ಯಾವುದೇ ರೀತಿಯ ಧನ ಸಹಾಯ ವಾಗಲೀ ಸಿಗುತ್ತಿಲ್ಲ. ಅದೇ ರೀತಿ ಆನೆ ಅಥವ ಕಾಡುಕೋಣಗಳ ಧಾಳಿಯಿಂದ ಬೆಳೆ ನಷ್ಟವಾದಲ್ಲಿಸೂಕ್ತ ಪರಿಹಾರವು ಸಿಗುತ್ತಿಲ್ಲ. ತಾಲ್ಲೂಕುನ್ನು ಕಾಡುತ್ತಿರುವ ಸಮಸ್ಯೆಯೊಂದಕ್ಕೆ ಸಮಗ್ರ ಉತ್ತರವನ್ನು ಕಂಡುಹಿಡಿಯುವಲ್ಲಿ ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹರೀಶ್, ಧರ್ಮರಾಜ್ ಇನ್ನಿತರು ಇದ್ದರು