ಕಾಡಾನೆ ಸಮಸ್ಯೆ : ಮುಖ್ಯಮಂತ್ರಿಗಳು ತಕ್ಷಣ ತುರ್ತಾಗಿ ಜನಪ್ರತಿನಿಧಿಗಳ ಮತ್ತು ಸಂಘಟನೆಗಳ ಸಭೆ ಕರೆಯುವಂತೆ ಶಾಸಕ ಎಚ್.ಕೆ ಕುಮಾರಸ್ವಾಮಿ ಒತ್ತಾಯ.
ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕಂಡುಹಿಡಿಯಲು ಮುಂದಾಗಬೇಕೆಂದು ಮನವಿ.
ಸಕಲೇಶಪುರ : ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಸ್ಥಳೀಯವಾಗಿ ಪರಿಸ್ಥಿತಿ ಗಂಭೀರವಾಗಿದ್ದು, ಪರಿಹಾರ ಕಂಡುಹಿಡಿಯಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಎರಡು ದಶಕಗಳಿಂದ ಮಲೆನಾಡು ಭಾಗಗಳಾದ ಹಾಸನ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಕೊಡಗು ಜಿಲ್ಲೆ ಮತ್ತಿತರ ಭಾಗಗಳಲ್ಲಿ ಅದರಲ್ಲೂ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಈವರೆಗೆ 80 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಾಂತರ ರೂ.ಗಳ ಬೆಳೆ ಹಾನಿಯಾಗಿದೆ. ದುರದೃಷ್ಟವಶಾತ್ ಈವರೆಗೆ ನೀಡುತ್ತಿರುವ ಬೆಳೆ ಪರಿಹಾರ ಅವೈಜ್ಞಾನಿಕವಾಗಿದ್ದು, ಸಕಾಲಕ್ಕೆ ನೀಡದೆ ಬಾಕಿ ಇರುತ್ತದೆ. ಪ್ರಾಣಹಾನಿ ಸಂಭವಿಸಿದಾಗ ನೀಡುವ ಪರಿಹಾರ ಸಾಲದು. ಹಾಲಿ ಕೈಗೊಂಡಿರುವ ತಾತ್ಕಾಲಿಕ ಪರಿಹಾರಗಳು ಏನೇನು ಸಾಲದು. ಅಂತೆಯೇ ಈ ಭಾಗದ ಶಾಸಕರುಗಳು ಕಾಡಾನೆ ಹಾವಳಿಗೆ ಸ್ಥಳಾಂತರ ಒಂದೇ ಪರಿಹಾರವೆಂದು ಒತ್ತಾಯಿಸುತ್ತಿದ್ದೇವೆ.
20.11.2022 ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದ ಘಟನೆ ಜನಸಾಮಾನ್ಯರು ಆಕ್ರೋಶಗೊಂಡಿರುವುದಕ್ಕೆ ಸಾಕ್ಷಿ. ಸಾಮಾನ್ಯರ ಜೊತೆ ಜನಪ್ರತಿನಿಧಿಗಳು ಕೂಡ ನೆಮ್ಮದಿಯಿಂದ ಇರುವಂತಿಲ್ಲ. ಜನಸಾಮಾನ್ಯರು ತೀವ್ರ ಆಕ್ರೋಶಗೊಂಡಿದ್ದು, ಕಾನೂನು ಕೈಗೆತ್ತಿಕೊಳ್ಳುವ ದಿನಗಳು ದೂರ ಇಲ್ಲ. ಅಲ್ಲದೆ ಈ ಭಾಗದಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುವ ಸಂಭವ ಇದೆ.
ದಿ: 01.11.2022 ರಂದು ಸಕಲೇಶಪುರ ತಾಲ್ಲೂಕಿನಲ್ಲಿ ಮತ್ತೋರ್ವ ರೈತರು ಆನೆ ದಾಳಿಯಿಂದ ಮೃತಪಟ್ಟಿದ್ದು, ಜನರು ಆಕ್ರೋಶಭರಿತರಾಗಿ ಜಿಲ್ಲಾ ಉಸ್ತುವಾರಿ ಸಚಿವರು ಬರುವ ತನಕ ಶವ ತೆಗೆಯದೇ ಪ್ರತಿಭಟಿಸಿದ್ದು ಮತ್ತು ತಮ್ಮ ನಿರ್ದೇಶನದಿಂದ ಪರಿಸ್ಥಿತಿ ತಿಳಿಗೊಂಡಿರುವುದು ಒಂದು ಉದಾಹರಣೆ, ಅಲ್ಲದೆ ಸರ್ಕಾರದ ನಿರ್ದೇಶನದಂತೆ ಎರಡು ವಾರಗಳ ಹಿಂದೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ಚರ್ಚೆ ಮಾಡಿ ಹೋಗಿದ್ದಾರೆ. ಆದರೆ ಈವರೆಗೆ ಫಲಿತಾಂಶ ಶೂನ್ಯ. ಸ್ಥಳದಲ್ಲಿ ಭಿಗುವಿನ ವಾತಾವರಣವಿದೆ, ಯಾವ ಸಂಧರ್ಭದಲ್ಲಾದರೂ ಏನು ಬೇಕಾದರೂ ಸಂಭವಿಸಬಹುದು.
ಹಾಗಾಗಿ ದಯಮಾಡಿ ತಮ್ಮ ನೇತೃತ್ವದಲ್ಲಿ ತಕ್ಷಣ ತುರ್ತಾಗಿ ಜನಪ್ರತಿನಿಧಿಗಳ ಮತ್ತು ಸಂಘಟನೆಗಳ ಸಭೆ ಕರೆದು ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕಂಡುಹಿಡಿಯಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
,