ಸಕಲೇಶಪುರ: ಕ್ರೀಡಾಭಾರತಿ ಹಾಸನ ವಿಭಾಗದ ವತಿಯಿಂದ, ಕೊರೊನ ಸಮಯದಲ್ಲಿ ವಾಟ್ಸಾಪ್ ಮೂಲಕ ಆನ್ ಲೈನ್ ಗುರುಕುಲ ಪ್ರಾರಂಭಿಸಿ, ಮಕ್ಕಳಲ್ಲಿ ಜಡತ್ವ ಹೋಗಲಾಡಿಸಿ ಹಾಗೆಯೇ ಸಂಸ್ಕಾರವನ್ನು ಕಲಿಸುವ ದೃಷ್ಟಿಯಿಂದ ಶ್ಲೋಕ ಕಲಿಕೆ, ಯೋಗ ಕಲಿಕೆ ಹಾಗೂ ಕರಕುಶಲ ಕಲೆಯ ತರಗತಿಗಳನ್ನು ಚನ್ನರಾಯಪಟ್ಟಣ, ಸಕಲೇಶಪುರ ಹಾಗೂ ಮೈಸೂರಿನ ಮಾತಾಜಿಯರು ನಡೆಸಿದ್ದರು. ಈ ತರಗತಿಗಳಲ್ಲಿ ಬೇರೆ ಬೇರೆ ಊರಿನ ಬೇರೆ ಬೇರೆ ಶಾಲೆಯ ಮಕ್ಕಳು ಸೇರಿದ್ದರು. ಈ ತರಗತಿಗಳಲ್ಲಿ 25 ಶ್ಲೋಕಗಳನ್ನು ಅರ್ಥ ಸಹಿತ ಕಲಿತ ಮಕ್ಕಳಿಗೆ ಮಾತಾಜಿಯರು ಶ್ಲೋಕ ಪರೀಕ್ಷೆಯನ್ನು ನಡೆಸಿದ್ದರು. ಈ ಶ್ಲೋಕ ಪರೀಕ್ಷೆಯಲ್ಲಿ ಸಕಲೇಶಪುರದ ರೋಟರಿ ಶಾಲೆಯ 30 ಕ್ಕೂ ಅಧಿಕ ಮಕ್ಕಳು ಉತ್ತೀರ್ಣರಾಗಿದ್ದು, ಆ ಮಕ್ಕಳಿಗೆ ಇಂದು ರೋಟರಿ ಶಾಲೆಯಲ್ಲಿ ಪದಕಗಳನ್ನು ವಿತರಿಸಲಾಯಿತು. ಇದೇ ವೇಳೆಯಲ್ಲಿ ಕಳೆದ ವರ್ಷ ಕ್ರೀಡಾ ಭಾರತಿಯ ಕ್ರೀಡಾ ಸಪ್ತಾಹ ಕಾರ್ಯಕ್ರಮದಲ್ಲಿ ರೋಟರಿ ಶಾಲೆಯ ಮಕ್ಕಳು 40 ದೇಸೀ ಕ್ರೀಡೆಗಳಾದ ಲಗೋರಿ ಹಾಗೂ ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸಿ ಜಯಶೀಲರಾಗಿದ್ದರು ಅವರಿಗೂ ಸಹ ಪದಕಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ರೋಟರಿ ಶಾಲೆಯ ಪ್ರಾಂಶುಪಾಲರಾದ ಸುಮಂತ್ ಭಾರ್ಗವ್ ಅವರು, ಮುಖ್ಯ ಶಿಕ್ಷಕರಾದ ರುದ್ರೇಶ್ ಅವರು, ಮುಖ್ಯ ಶಿಕ್ಷಕಿಯಾದ ರತ್ನ ಅವರು, ಶೈಕ್ಷಣಿಕ ಸಂಯೋಜಕಿಯಾದ ಸ್ವಾತಿ ಅವರು ಹಾಗೂ ಕ್ರೀಡಾ ಭಾರತಿಯ ಸದಸ್ಯರುಗಳು ಮತ್ತು ಗುರುಕುಲದ ಮಾತಾಜಿಯರು ಉಪಸ್ಥಿತರಿದ್ದರು.