Saturday, November 23, 2024
Homeಸುದ್ದಿಗಳುಪಾಳ್ಯ: ಶಿಂಗೋಡಹಳ್ಳಿ ಸಮೀಪದ ಮೂಡಲಕೊಪ್ಪಲಿನಲ್ಲಿ ಈಶ್ವರಸ್ವಾಮಿಯ ಕಾರ್ತಿಕ ಪುಜೆ

ಪಾಳ್ಯ: ಶಿಂಗೋಡಹಳ್ಳಿ ಸಮೀಪದ ಮೂಡಲಕೊಪ್ಪಲಿನಲ್ಲಿ ಈಶ್ವರಸ್ವಾಮಿಯ ಕಾರ್ತಿಕ ಪುಜೆ

ಪಾಳ್ಯ ಸಮೀಪದ ಮೂಡಲಕೊಪ್ಪಲಿನಲ್ಲಿ ಈಶ್ವರಸ್ವಾಮಿಯ ಕಾರ್ತಿಕ ಪುಜೆ

ಸಕಲೇಶಪುರ/ಆಲೂರು : ಪಾಳ್ಯ ಹೋಬಳಿ ಶಿಂಗೋಡಹಳ್ಳಿ ಸಮೀಪದ ಮೂಡಲಕೊಪ್ಪಲಿನಲ್ಲಿರು ಈಶ್ವರಸ್ವಾಮಿಯ ಕಾರ್ತಿಕ ಪುಜೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

 ಗ್ರಾಮದ ಮಹಿಳೆಯರು ಮಕ್ಕಳು ಪೂಜಾ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ನಂತರ ಪ್ರಸಾದ ವಿನಿಯೋಗ ನಡೆಯಿತು.

ಕಾರ್ತಿಕ ಮಾಸದ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಬೇಕೆಂಬುದು ಯಾಕೆ ಗೊತ್ತಾ?

ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶ ಮಾಡುವ ಮಾಸವಾದ ಕಾರ್ತಿಕ ಮಾಸ ಹಿಂದೂಗಳ ಸಂಪ್ರದಾಯದಲ್ಲಿ ವಿಶೇಷ ಮಹತ್ವ ಪಡೆದಿದ್ದು ಕಾರ್ತಿಕ ಮಾಸದ ಸೋಮವಾರಗಳನ್ನು ಅತ್ಯಂತ ಪವಿತ್ರ, ಮಂಗಳಕರ ದಿನವೆಂಬ ನಂಬಿಕೆ ಇದ್ದು ಶಿವನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ.

ಕಾರ್ತಿಕ ಮಾಸಕ್ಕೂ ಶಿವನಿಗೂ ಇರುವ ಸಂಬಂಧವನ್ನು ಹುಡುಕಿ ಹೊರಟರೆ ಪೌರಾಣಿಕ ಪುಟಗಳು ತೆರೆದುಕೊಳ್ಳುತ್ತವೆ. ಹಿಂದೊಮ್ಮೆ ರಾಕ್ಷಸನಾದ ತಾರಕನ 3 ತಮ್ಮಂದಿರು ಬ್ರಹ್ಮ ನನ್ನು ಕುರಿತು ತಪಸ್ಸು ಮಾಡಿದ್ದರು. ತಪಸ್ಸಿಗೆ ಮೆಚ್ಚಿದ ಬ್ರಹ್ಮ, 3 ಅಸುರ ಸಹೋದರರಿಗೆ ಅಂತರಿಕ್ಷದಲ್ಲಿ ತೇಲಾಡುವ 3 ನಗರಗಳನ್ನು ವರವಾಗಿ ನೀಡುತ್ತಾನೆ. ಹಾಗಾಗಿಯೇ ಈ ರಾಕ್ಷಸ ಸಹೋದರರಿಗೆ ತ್ರಿಪುರಾಸುರರು ಎಂಬ ಹೆಸರು ಬರುತ್ತದೆ. ವರವಿದ್ದ ಮೇಲೆ ಅದಕ್ಕೆ ಒಂದು ಮಿತಿಯೂ ಇರುತ್ತದೆ ಹಾಗೆಯೇ 3 ನಗರಗಳನ್ನು ಯಾರು ಕೇವಲ ಒಂದೇ ಬಾಣದಿಂದ ಒಂದು ಮಾಡಿ ಅದನ್ನು ಸುಟ್ಟು ಬೂದಿ ಮಾಡುತ್ತಾರೋ,ಅವರಿಂದ ಆ ರಾಕ್ಷಸರಿಗೆ ಮರಣ ಎಂದೂ ಹೇಳುತ್ತಾನೆ ಬ್ರಹ್ಮ.

ಸಾಮಾನ್ಯವಾಗಿ ಅಧಿಕಾರ ಸಿಕ್ಕ ಬೆನ್ನಲ್ಲೇ ದರ್ಪ ತೋರುವುದು ಮನುಷ್ಯನ ಸಹಜ ಗುಣ ಅಂತೆಯೇ, ಬ್ರಹ್ಮನ ವರದಿಂದ ಮದೊನ್ಮತ್ತರಾದ ತ್ರಿಪುರಾಸುರರು ಸ್ವರ್ಗದ ಮೇಲೆ ಆಕ್ರಮಣ ಮಾಡಿ ಅಲ್ಲಿಂದ ದೇವತೆಗಳನ್ನು ಹೊರಹಾಕುತ್ತಾರೆ. ದೇವತೆಗಳು ದಾರಿ ಕಾಣದೇ ಶಿವನನ್ನು ಆಶ್ರಯಿಸುತ್ತಾರೆ. ಶಿವ ತ್ರಿಪುರಾಸುರರು ಪಡೆದಿರುವ ವರದ ಮಾಹಿತಿಯನ್ನು ಪಡೆಯುತ್ತಾನೆ. ನಂತರ ಎಲ್ಲ ದೇವತೆಗಳೂ ಸೇರಿ ತಮ್ಮ ಶಕ್ತಿಯಿಂದ ಕೂಡಿದ ಒಂದು ಬಾಣವನ್ನು ತಯಾರಿಸುತ್ತಾನೆ. ಆ ಬಾಣದಿಂದಲೇ ಶಿವ ರಾಕ್ಷಸರ 3 ನಗರಗಳನ್ನು ಒಟ್ಟು ಭಸ್ಮ ಮಾಡುತ್ತಾನೆ. ತ್ರಿಪುರಗಳು ಸುಟ್ಟು ಭಸ್ಮವಾದ ಬೆನ್ನಲ್ಲೇ ತ್ರಿಪುರಾಸುರರನ್ನೂ ಕೊಲ್ಲುತ್ತಾನೆ. ಇದರಿಂದ ಶಿವನಿಗೆ ತ್ರಿಪುರಾಂತಕ ಎಂಬ ಹೆಸರು ಬಂದಿದೆ. ಇದು ಘಟಿಸಿದ್ದು ಕಾರ್ತಿಕ ಮಾಸದ ಪೌರ್ಣಮಿಯಂದು. ಹಾಗಾಗಿ ಕಾರ್ತಿಕ ಮಾಸದಲ್ಲಿ ಶಿವನನ್ನು ಆತನ ಇಷ್ಟವಾರವಾದ ಸೋಮವಾರದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಇವೆಲ್ಲದರೊಂದಿಗೆ ಗಂಗಾ ನದಿ ಎಲ್ಲಾ ನದಿಗಳಿಗೂ, ಕಾಲುವೆಗಳಿಗೂ ಹರಿದು ಗಂಗಾ ನದಿಯಷ್ಟೆ ಅವುಗಳನ್ನೂ ಪವಿತ್ರಗೊಳಿಸುವ ಮಾಸ ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಪೂರ್ತಿ 30 ದಿನಗಳ ಕಾಲ ಕಾರ್ತಿಕ ಪುರಾಣವನ್ನು ಪಾರಾಯಣ ಮಾಡಲಾಗುತ್ತದೆ. ಚಳಿಗಾಲವಾದ ಕಾರ್ತಿಕ ಮಾಸದಲ್ಲಿ ಮುಂಜಾನೆ ತಣ್ಣೀರಿನ ಸ್ನಾನ ಮಾಡುವ ಪದ್ಧತಿಯೂ ಇದ್ದು, ಈ ರೀತಿ ಮಾಡುವುದರಿಂದ ಚಳಿಗಾಳವನ್ನು ಎದುರಿಸುವುದು ಸುಲಭವಾಗುತ್ತದೆ ಎಂಬ ವೈಜ್ಞಾನಿಕ ಕಾರಣಗಳನ್ನೂ ಕಾರ್ತಿಕ ಮಾಸ ವ್ರತಾಚರಣೆಗೆ ನೀಡಲಾಗಿದೆ.

ಕಾರ್ತಿಕ ಮಾಸ ವ್ರತಾಚರಣೆಯಿಂದ ಹಿಂದಿನ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗಿದೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಅಭ್ಯುದಯ, ಸಂಪತ್ತು, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದ್ದು, ಲೌಕಿಕ ಬಯಕೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಎಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಕಾರ್ತಿಕ ಮಾಸದಲ್ಲಿ ಸಾಮಾನ್ಯವಾಗಿ ತುಳಸಿ ಗಿಡದ ಎದುರು ದೀಪಗಳನ್ನಿಟ್ಟು ಪೂಜೆ ಮಾಡುವ ಸಂಪ್ರದಾಯದ ಆಚರಣೆಯ ಹಿಂದೆ ಒಂದು ಪೌರಾಣಿಕ ಕಥೆ ಚಾಲ್ತಿಯಲ್ಲಿದೆ. ಅದೇನೆಂದರೆ, ಕ್ಷೀರಸಾಗರವನ್ನು ಮಥಿಸಿದಾಗ ಆವಿರ್ಭಾವಗೊಂಡ ಲಕ್ಷ್ಮಿಯ ಸಹೋದರಿ ತುಳಸಿ. ತುಳಸಿ ವಿಷ್ಣುವನ್ನು ವರಿಸಬೇಕೆಂಬ ಇಚ್ಛೆ ಹೊಂದಿರುತ್ತಾಳೆ. ಆದರೆ ಶಾಪಕ್ಕೆ ಗುರಿಯಾಗಿ ಗಿಡವಾಗಿ ಜನ್ಮ ಪಡೆಯುತ್ತಾಳೆ. ಆದರೆ ವಿಷ್ಣು ತುಳಸಿಯ ಇಚ್ಛೆಯನ್ನು ಮನ್ನಿಸಿ, ತಾನು ಸಾಲಿಗ್ರಾಮದ ರೂಪದಲ್ಲಿರಬೇಕಾದರೆ ತುಳಸಿ ತನಗೆ ಅತ್ಯಂತ ಪ್ರಿಯವಾದದ್ದಾಗಿರುತ್ತದೆ ಎಂಬ ವರ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಸಾಲಿಗ್ರಾಮಕ್ಕೆ ತುಳಸಿ ಅರ್ಪಿಸುವುದು ಶ್ರೇಷ್ಠವಾಗಿದ್ದು, ಕಾರ್ತಿಕ ಮಾಸದ ಶುಕ್ಲ ದ್ವಾದಶಿಯ ದಿನದಂದು ತುಳಸಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

RELATED ARTICLES
- Advertisment -spot_img

Most Popular