ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಬಂಧ ಹಿನ್ನೆಲೆಯಲ್ಲಿ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ ಬೆನ್ನಲ್ಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಪಿಎಫ್‌ಐ ಬಲಿಷ್ಠವಾಗಿರುವುದೇ ದಕ್ಷಿಣ ಕನ್ನಡ ಭಾಗದಲ್ಲಿ. ಪಿಎಫ್‌ಐ ಬ್ಯಾನ್‌ಗೆ ಹಾಗೂ ಪಿಎಫ್‌ಐನ ಹಲವು ಮುಖಂಡರ ಬಂಧನಕ್ಕೆ ಪ್ರತೀಕಾರವಾಗಿ ಕರಾವಳಿ ಜಿಲ್ಲೆಯಲ್ಲಿ ಈ ರೀತಿ ದೊಡ್ಡಮಟ್ಟದ ದಾಳಿಗೆ ಉಗ್ರರು ಸಂಚು ನಡೆಸಿದ್ದರೇ ಎಂಬ ಸಂಶಯ ಇದೀಗ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸುಮಾರು 15 ಪಿಎಫ್‌ಐ ಕಾರ್ಯಕರ್ತರು, ಮುಖಂಡರನ್ನು ಬಂಧಿಸಲಾಗಿತ್ತು.
ಇದು ಸಂಘಟನೆಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಇದರ ಜತೆಗೇ ಪಿಎಫ್‌ಐ ನಿಷೇಧಿಸಿದ ಕೇಂದ್ರ ಸರ್ಕಾರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಹಲವರನ್ನು ದ.ಕ.ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಇದಕ್ಕೆ ಎಸ್‌ಡಿಪಿಐಯಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಇದೇ ದ್ವೇಷದಿಂದ ಏನಾದರೂ ದುಷ್ಕೃತ್ಯ ಎಸಗಿರಬಹುದೇ ಎಂಬ ನಿಟ್ಟಿನಲ್ಲಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ನಿಷೇಧಿತ ಸಂಘಟನೆಯ ಇನ್ನೂ ಹಲವರ ಲೋಕೇಶನ್ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಈ ಕೃತ್ಯದೊಂದಿಗೆ ಅವರ ಶಾಮೀಲಾಗಿದ್ದಾರೆಯೇ ಎಂಬ ಕುರಿತೂ ಪರಿಶೀಲನೆ ನಡೆಯುತ್ತಿದೆ.
ಮಂಗಳೂರು ಆಟೋ ರಿಕ್ಷಾ ಸ್ಫೋಟ ಉಗ್ರ ಕೃತ್ಯ: ಮಂಗಳೂರಿನ ಗರೋಡಿಯಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ. ಗಂಭೀರ ಹಾನಿಯುಂಟು ಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದನಾ ಕೃತ್ಯವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.