ಸಕಲೇಶಪುರ:ನಾರಾಯಣ ಗುರು ಸೇವಾ ಸಮಿತಿ,ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಸಮಿತಿ ಬ್ರಹ್ಮಶ್ರೀ ಯುವ ಬಿಲ್ಲವ ವೇದಿಕೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ದಿನಾಂಕ 17-11-2022ರಂದು ಬೆಳಿಗ್ಗೆ ಬೃಹತ್ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಾರಾಯಣ ಗುರು ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಆರ್.ಎಸ್ ಭಾಸ್ಕರ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ನಾರಾಯಣ ಗುರು ಸಮಾಜವು ಸುಮಾರು 26 ಉಪ ಪಂಗಡಗಳನ್ನು ಹೊಂದಿದೆ. ಬಹುತೇಕ ಪಂಗಡಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ.ತಾಲೂಕಿನಲ್ಲಿ ಸುಮಾರು 12ಸಾವಿರಕ್ಕೂ ಹೆಚ್ಚು ಮಂದಿ ಸಮಾಜಕ್ಕೆ ಸೇರಿರುವ ಜನರಿದ್ದು ಆದರು ಸಹ ಸಮಾಜಕ್ಕೆ ಸೂಕ್ತ ಗೌರವ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಶಕ್ತಿಯನ್ನು ತೋರಿಸಲು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದು , ಬೆಂಗಳೂರಿನ ಸೋಲೂರು ಮಠದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಶಾಸಕ ಎಚ್.ಕೆ ಕುಮಾರಸ್ವಾಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನೀಲ್ ಕುಮಾರ್, ಸಂಸದ ಪ್ರಜ್ವಲ್ ರೇವಣ್ಣ , ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರುವರು. ಎಲ್ಲಾ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಶಿವಕುಮಾರ್ ,ಖಚಾಂಚಿ ದಿನೇಶ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಶ್ರೀಧರ್ ಹಾಜರಿದ್ದರು.