Breaking news : ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೆ ತರುವಂತೆ ಶಾಸಕ ಎಚ್. ಕೆ ಕುಮಾರಸ್ವಾಮಿ ಒತ್ತಾಯ.
ಸಕಲೇಶಪುರ : ಮದ್ಯ ವ್ಯಸನದಿಂದ ಅಧಿಕಾರ ದುರುಪಯೋಗ, ಜಗಳ, ಅಶಾಂತಿ ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಿದೆ. ಹೀಗಾಗಿ ಮದ್ಯಪಾನ ನಿಷೇಧಿಸುವುದು ಇಂದಿನ ಅತ್ಯಂತ ಅವಶ್ಯಕತೆಯಾಗಿದೆ ಆದ್ದರಿಂದ ರಾಜ್ಯದಲ್ಲಿ ಪಾನ ನಿಷೇದ ಜಾರಿಗೆ ತರುವಂತೆ ಸರಕಾರವನ್ನು ಒತ್ತಾಯಿಸಿದರು.
ಶನಿವಾರ ಸಕಲೇಶಪುರ ನಗರದದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ 1615 ನೇ ಮದ್ಯ ವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಕ್ಕೆ ಮದ್ಯ ಮಾರಾಟದಿಂದ ವರ್ಷಕ್ಕೆ 30 ಸಾವಿರ ಕೋಟಿ ರೂ ಆದಾಯವಿದೆ ಆದರೆ ಆದಾಯಕ್ಕಿಂತ ರಾಜ್ಯದ ಜನರ ಅರೋಗ್ಯ ಜೀವನ ಮುಖ್ಯ ಈ ನಿಟ್ಟಿನಲ್ಲಿ ಸರಕಾರ ಆದಾಯ ದೃಷ್ಟಿಯಿಂದ ನೋಡದೆ ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇದಿಸಬೇಕು ಎಂದು ಒತ್ತಾಯಿಸಿದರು
ಶ್ರಮಜೀವಿಗಳು ಬಡವರು, ಜೀವನದ ಜಂಜಾಟದಿಂದ ತತ್ತರಿಸಿದವರ ಸುಖಕ್ಕಾಗಿ ಮದ್ಯಪಾನ ಬೇಕೇಬೇಕು ಎಂದು ವಾದಿಸುವವರಿದ್ದಾರೆ. ಮದ್ಯಪಾನ ಶ್ರಮ ಜೀವಿಗಳಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ ಅವರ ಬಡತನ ಹೆಚ್ಚಿ ಮರಣಗಳು ಹೆಚ್ಚುತ್ತವೆ. ನಿರಂತರ ಮನೆಯಲ್ಲಿ ಸುಖ – ಶಾಂತಿ ಬದಲು , ದುಃಖ ಕಷ್ಟಗಳಿಗೆ ಭದ್ರ ಬುನಾದಿ ಹಾಕುತ್ತದೆ. ಮದ್ಯಪಾನದಿಂದ ಹೆಣ್ಣುಮಕ್ಕಳು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಮಕ್ಕಳು ತಮ್ಮ ಬಾಲ್ಯದ ಸುಖ ನೆಮ್ಮದಿಯಿಂದ ವಂಚಿತರಾಗುತ್ತಿದ್ದಾರೆ. ಮದ್ಯಪಾನ ಕುಟುಂಬಗಳನ್ನು ಒಡೆಯುತ್ತಿದೆ. ಸುಶಿಕ್ಷಿತ ವರ್ಗದಲ್ಲಿ ವಿವಾಹ ವಿಚ್ಛೇದನಗಳು ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿವೆ ಎಂದು ಅವರು ತಿಳಿಸಿದ್ದಾರೆ.
ಮದ್ಯಪಾನ ನಿಷೇದ ಅತ್ಯಂತ ಕಠಿಣವಾದರೂ ಇದು ಶ್ರೇಷ್ಠ ಕೆಲಸ. ಪ್ರಸಕ್ತ ಪ್ರಕೃತಿ ರೂಪಿಸಿರುವ ಪರಿಸ್ಥಿತಿಯ ಪ್ರಯೋಜನ ಪಡೆದು ಸಂತಸದ , ನೆಮ್ಮದಿಯ , ತೃಪ್ತಿಯ ಸಮಾಜ ನಿರ್ಮಾಣದತ್ತ ಹೆಜ್ಜೆಗಳನ್ನಿಡಲು ಸರ್ಕಾರ ದೃಢ ಸಂಕಲ್ಪರಾಗಬೇಕು. ಮದ್ಯಪಾನ ನಿಷೇಧಕ್ಕೆ ಸುಸಂಸ್ಕೃತ ಸಮಾಜ, ಅದಲ್ಲಿಯೂ ಮಹಿಳಾ ಸಂಘಟನೆಗಳು ಹೊರಾಡುತ್ತಿವೆ. ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ ಕೂಡ ಮನಃಪರಿವರ್ತನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
ಇದನ್ನು ಗಮನದಲ್ಲಿರಿಸಿಕೊಂಡು ನಾಡಿನ ಅಭಿವೃದ್ಧಿ ಸೂಚ್ಯಂಕಕ್ಕಿಂತ ಸಮಾಜದ ಸಂತೋಷದ , ನೆಮ್ಮದಿಯ ಸೂಚ್ಯಂಕ ಹೆಚ್ಚುವಂತೆ ಮಾಡಲು ನಿರ್ಮಲ ವಾತಾವರಣ ನಿರ್ಮಿಸಬೇಕಾಗಿದೆ ಎಂದರು.