*ಸಮಾಜಮುಖಿ ಹೃದಯದ..ಅಪೂರ್ವ ದಾಸೋಹಿ..ಘನವಂತೆ ಸುಶೀಲಮ್ಮ.*
ಕೊಡಗು ಜಿಲ್ಲೆಯ ಶನಿವಾರಸಂತೆಯ ಕಿತ್ತೂರು ಗ್ರಾಮದ ಶ್ರೀಮತಿ ತಂಗಮ್ಮ ಮತ್ತು ಕೊಡಗು ಸಂಸ್ಥಾನದ ಮಂತ್ರಿಗಳಾದ ಶ್ರೀ ಮಲ್ಲಪ್ಪನವರ ಹಿರಿಯ ಮಗಳಾಗಿ 04/03/1930 ಜನಿಸಿದರು. ತಂದೆ ತಾಯಿಗಳ
ಪ್ರೇಮದ ಪುತ್ಥಳಿಯಾದ ಸ್ಪುರದ್ರೂಪಿ ಸುಶೀಲಮ್ಮ ಹೆಸರಿಗೆ ತಕ್ಕಂಥ ಸೌಜನ್ಯಶೀಲ ನಡವಳಿಕೆಯುಳ್ಳವರಾಗಿದ್ದರು.
ಮನೆಯವರ ಪ್ರೀತಿಗಳಿಸಿದಂತೆ, ತಾನು ಓದುತ್ತಿದ್ದ
ಕಾನ್ವೆಂಟ್‌ನಲ್ಲಿಯೂ ಎಲ್ಲರ ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದರು. ಇವರು ಶಾಲೆಯಿಂದ ಕಾಲೇಜ್
ವಿದ್ಯಾಭ್ಯಾಸದವರೆಗೂ ಓದಿದ ಕತೆ ಕಾದಂಬರಿಗಳಿಗೆ ಲೆಕ್ಕವಿಲ್ಲ. ಮಡಿಕೇರಿಯ ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಶಾಲಾ ವಿದ್ಯಾಭ್ಯಾಸ. ಹೆಣ್ಣು ಮಕ್ಕಳು ಕಾಲೇಜು ಮೆಟ್ಟಿಲು
ಹತ್ತುವುದು ಅಪರೂಪವಾಗಿದ್ದ ಆ ದಿನಗಳಲ್ಲಿ ಇಂಟರ್ ಮಿಡಿಯೇಟ್ ವಿದ್ಯಾಭ್ಯಾಸಕ್ಕಾಗಿ
ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಹೋಗುವ ಸದಾವಕಾಶ ಇವರಿಗೆ ದೊರೆತಿತ್ತು. ನಂತರ 05/04/1952 ರಂದು ಸಕಲೇಶಪುರ ತಾಲೂಕಿನ ಕುಂಬರಹಳ್ಳಿ ಗ್ರಾಮದ ಬಿ.ಬಿ. ಶಿವಪ್ಪನವರೊಂದಿಗೆ ವಿವಾಹ ನೆರವೇರಿತು.
ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥಾ.
ವಚನಕಾರ ಶರಣ ದೇವರ ದಾಸಿಮಯ್ಯನವರು ತಮ್ಮ ಪತ್ನಿ ದುಗ್ಗಳೆಯ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳಿವು. ಅಂತೆಯೇ ಸತಿ ಪತಿಗಳೊಂದಾಗಿ ಶಿವನಿಗೆ
ಹಿತವಾಗಿ ನಡೆದುಕೊಂಡ ಭಕ್ತಿ ಸಂಪನ್ನ ಕಾಯಕನಿರತ ದಂಪತಿಗಳನ್ನು ವೀರಶೈವ-ಲಿಂಗಾಯಿತ ಸಮಾಜದಲ್ಲಿ ಶತಮಾನಗಳುದ್ದಕ್ಕೂ ಕಾಣುತ್ತಲೇ ಬಂದಿದ್ದೇವೆ. ಆ ಸಾಲಿನಲ್ಲಿ ನಿಲ್ಲುವ ಆದರ್ಶ ದಂಪತಿಗಳು ಮಾಜಿ ಶಾಸಕ ಬಿ.ಬಿ. ಶಿವಪ್ಪ ಹಾಗೂ ಶ್ರೀಮತಿ ಗೌರಮ್ಮ ಅವರು. ಶ್ರೀಮತಿ ಸುಶೀಲಮ್ಮನವರದಂತೂ ಪತಿಗಿಂತಲೂ ಒಂದು ತೂಕ ಹೆಚ್ಚ
ಅನ್ನಿಸುವಷ್ಟು ಜನಪ್ರಿಯತೆ. ಈ ಕೊಡುಗೈ ದಾನಿ ಮನೆಗೆ ಬಂದ ಯಾರನ್ನೂ ಬರಿಗೈಯಿಂದ ಕಳಿಸಿದವರಲ್ಲ. ತಾಯ್ತನವನ್ನು ಕುಟುಂಬದಿಂದ ಸಮಾಜಕ್ಕೆ ವಿಸ್ತರಿಸಿದ ಮಹಾಮಾತೆ ಇವರು.
“ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು” ಎಂಬ ಮಾತಿಗೆ ಸ್ಪಷ್ಟ ನಿದರ್ಶನ ತಾಯಿ ಸುಶೀಲಮ್ಮ ಅವರು. ಅನೇಕ ಸಂಘ ಸಂಸ್ಥೆಗಳಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ. ಮಹಿಳೆ ಮತ್ತು ಮಕ್ಕಳ ಏಳೆಗಾಗಿ ಹಗಲಿರುಳು ದುಡಿಯುತ್ತಿದ್ದರು ಇವರು ಹತ್ತಾರು ವಿದ್ಯಾರ್ಥಿನಿಯರನ್ನು ದತ್ತು ಪಡೆದು ಅವರ ಬದುಕಿನ ಪ್ರಣತೆಗೆ ತೈಲವನ್ನೆರೆಯುತ್ತಿದ್ದರು.ರಾಜಕೀಯದಲ್ಲಿ ಪತಿಗೆ ಹೆಗಲಾಗಿ ಸಲ್ಲಿಸಿದ ಮಾನವೀಯ ಸೇವೆಯು ಇಲ್ಲಿ ಸ್ಮರಣೀಯ.
ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊಂಡು ಹುಟ್ಟಿ, ಬಂಗಾರದ ಮನೆ ಸೇರಿದ ಸುಶೀಲಮ್ಮ, ಸಿರಿವಂತ ಕುಟುಂಬದಲ್ಲಿ ತಮ್ಮಷ್ಟಕ್ಕೆ ತಾನೇ ಕಾಲಕಳೆಯಬಹುದಾದ ಅವಕಾಶ ಹೊಂದಿದ್ದರು, ಆದರೆ ತಾವು ನಕ್ಕರಷ್ಟೆ ಸಾಲದು, ಸುತ್ತಲಿನ ಸಮಾಜ ನಗಬೇಕೆಂಬ ಮಮತೆ ಕಾಳಜಿಯನ್ನು ರೂಢಿಸಿಕೊಂಡಿದ್ದ ಕುಂಭರಹಳ್ಳಿ ಮನೆತನದ ಸಹಜ ಆಶಯ
ಸುಶೀಲಮ್ಮನವರಲ್ಲೂ ಪ್ರತಿಬಿಂಬಿತವಾಯಿತು. ಪತಿ ಸಮಾಜ ಸೇವಾ ಧುರೀಣ, ಶುದ್ಧ ರಾಜಕಾರಣಿ ಬಿ.ಬಿ. ಶಿವಪ್ಪ ನವರ ನೆರಳಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಸುಶೀಲಮ್ಮ ಆದರ್ಶ ಶರಣೆ ಯಾಗಿದ್ದರು.
ರಾಜಕೀಯದಲ್ಲಿ ಪತಿ ಶಿವಪ್ಪನವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ದುರಾದೃಷ್ಟದಿಂದ ಸೋಮವಾರಪೇಟೆ, ಬೆಂಗಳೂರಿನ ರಾಜಾಜಿನಗರ, ಹಾಗೂ ಸಕಲೇಶಪುರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋಲು, ಹಾಸನ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಸೋತರೂ, ಛಲಬಿಡದ ತ್ರಿವಿಕ್ರಮನಂತೆ ಸೋಲಿನ ಮೇಲೆ ಸೋಲಿನ ಪೆಟ್ಟನ್ನು ಅನುಭವಿಸಿದರೂ ಧೃತಿಗೆಡದೆ ಪಕ್ಷದ ರಾಜ್ಯಾಧ್ಯಾಕ್ಷರಾಗಿ ಪಕ್ಷವನ್ನು ಬಲಗೊಳಿಸಲು ಅವಿರತ ಶ್ರಮಿಸಿದರು. ಅದೇ ಪಕ್ಷದ ಸಕ್ರಿಯ, ಪ್ರಾಮಾಣಿಕ ಕಾರ್ಯಕರ್ತೆಯಾಗಿ,ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆಯಾಗಿ ಪತ್ನಿ ಸುಶೀಲರವರು ಹೆಜ್ಜೆ ಹೆಜ್ಜೆಗೂ ಬೆಂಬಲವನ್ನಿತ್ತರು.ದಂಪತಿಗಳಿಬ್ಬರೂ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾನಿ, ಶ್ರೀಮತಿ ಸುಷ್ಠಾ ಸ್ವರಾಜ್ ಮುಂತಾದ ಭಾರತೀಯ ಜನತಾ ಪಕ್ಷದ ರಾಷ್ಟ್ರ ನಾಯಕರೊಂದಿಗೆ ನಿಕಟ ಆತ್ಮೀಯ ಸಂಬಂಧವಿದ್ದವರು. ಕೊನೆಗೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು 1985 ರಲ್ಲಿ ವಿಧಾನ ಪರಿಷತ್ ಸದಸ್ಯರಾದರು. ಆ ಸಂದರ್ಭದಲ್ಲಿ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಕ್ಷೇತ್ರಕ್ಕೆ ತಂದು ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದರು. 1994 ಹಾಗೂ 98 ರಲ್ಲಿ ಸಕಲೇಶಪುರ ಕ್ಷೇತ್ರದಿಂದ ಎರಡು ಬಾರಿ ವಿಧಾನ ಸಭಾ ಸದಸ್ಯರಾದರು.ಹಲವಾರು ಭಾರಿ ವಿಧಾನ ಸಭೆಯ ಕಾರ್ಯಕಲಾಪಗಳನ್ನು ಸಭಾಪತಿಯ ಸ್ಥಾನದಲ್ಲಿದ್ದು ಸಮರ್ಪಕವಾಗಿ ನಿರ್ವಹಿಸಿದರು. ಆದರೆ ರಾಜಕೀಯ ಚದುರಂಗದಾಟದಲ್ಲಿ ಇವರು ಬಲಿಪಶುವಾಗಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ವಂಚಿತರಾದರು. ಇವರ ಮುಗ್ಧತನ, ಸರಳತನ, ಪ್ರಾಮಾಣಿಕತೆಯೇ ಇವರ ರಾಜಕೀಯ ಬೆಳವಣಿಗೆಗೆ ಮುಳುವಾಗಲು ಪ್ರಾರಂಭವಾಯಿತು.ದಂಪತಿಗಳಿಬ್ಬರೂ ತನು-ಮನ-ಧನ ಆರ್ಪಿಸಿ ಕಟ್ಟಿದ ಪಕ್ಷವನ್ನು ತಾವೇ ತೊರೆಯುವ ಪರಿಸ್ಥಿತಿ ಶಿವಪ್ಪನವರಿಗೆ ಬಂದೊದಗಿತು. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ಸುಶೀಲಮ್ಮರವರು ರಾಜಕೀಯದಿಂದ ದೂರ ಸರಿದರು.
ಸುಶೀಲಮ್ಮ ಹೆಸರೇ ಸೂಚಿಸಿರುವಂತೆ ನೋಡಿದೊಡನೆ ಕೈಯೆತ್ತಿ ಗೌರವ ಸೂಚಿಸುವಂತಹ ವ್ಯಕ್ತಿತ್ವ. ಗೌರವ ಸೂಸುವ ಅತಿಥ್ಯ ,ಬಾಲರಿಂದ ವೃದ್ಧರವರೆಗೆ ಎಲ್ಲ ರೊಡನೆ ಒಂದೇ ರೀತಿಯಲ್ಲಿ ಬೆರೆಯುವ ರೀತಿ,ಅಲ್ಲದೆ ನಾನು ಶ್ರೀಮಂತ ದೊಡ್ಡವಳು ಎಂಬ ಗರ್ವವಿಲ್ಲದ ಮೃದು ಹೃದಯಿ, ಒಂದು ಮನೆಯ ಮಗಳಾಗಿ, ಪರ ಮನೆಯ ಸೊಸೆಯಾಗಿ, ಮಾತೆಯಾಗಿ, ಅಜ್ಜಿಯಾಗಿ, ಒಂದು ಮನೆಗೆ ಮೀಸಲಾಗದೆ, ಇಡೀ ಸಮಾಜಕ್ಕೆ ಮಾತೆಯಾಗಿದ್ದರು. ಸುಶೀಲಮ್ಮ ನವರು
ಮೂವರು ಪುತ್ರರಾದ ಪ್ರತಾಪ್ ಪ್ರದೀಪ್ ಮತ್ತು ಸುದೀರ್ ರನ್ನು ಬಿಟ್ಟು ಅಗಲಿದ್ದಾರೆ.
ಅಗಲಿಕೆ ಅನಿವಾರ್ಯ..
ಸಮಾಜಕ್ಕೆ ನೀಡಿದ ಕೊಡುಗೆಯ ನೆನಪೊಂದೇ ಚಿರಕಾಣಿಕೆ.
ಭಾವಪೂರ್ಣ ಶ್ರದ್ಧಾಂಜಲಿ.
*ಯಡೇಹಳ್ಳಿ”ಆರ್”ಮಂಜುನಾಥ್.*