‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ – ಅರ್ಥ ಬಹಳ ಅಶ್ಲೀಲವಾಗಿದೆ: ಸತೀಶ್ ಜಾರಕಿಹೊಳಿ.
ಚಿಕ್ಕೋಡಿ: ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ (Hindu) ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ (Persian) ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ (Shivaji) ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ಪೇಂಟಿಂಗ್ ಇರುವುದು ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್ ಮದಾರಿ ಎನ್ನುವ ಚಿತ್ರಕಾರ ಆ ಪೇಂಟಿಂಗ್ ತಯಾರಿಸಿದ್ದರು ಎಂದು ತಿಳಿಸಿದ್ದಾರೆ.
ಪ್ರತಾಪಗಡ್ ಕೋಟೆಯಲ್ಲಿ ಶಿವಾಜಿ ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಅವರ ಕಾಲದಲ್ಲಿ ಸಮಾನತೆಯಿತ್ತು. ಆದರೆ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ಇತಿಹಾಸ ಬೇರೆ ಇದೆ. ನಮಗೆ ಬೇರೆ ಇತಿಹಾಸ ತೋರಿಸಲಾಗುತ್ತಿದೆ. ಬಸವಣ್ಣ, ಶಿವಾಜಿ, ಸಂತ ತುಕಾರಾಮ ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಬೇರೆ ತೋರಿಸಲಾಗುತ್ತಿದೆ. ಬಸವಣ್ಣವರ ಕಾಲದಲ್ಲಿ ಸಾಕಷ್ಟು ಹತ್ಯೆಗಳು ನಡೆದವು ಅದನ್ನು ಮುಸ್ಲಿಮರು ಮಾಡಿದ್ರಾ? ಒಂದು ಲಕ್ಷ ಜೈನರ ಹತ್ಯೆಗಳಾಗಿವೆ ಎಂದು ಜೈನ್ ಸ್ವಾಮೀಜಿ ಹೇಳಿದ್ದಾರೆ. ಜೈನರ ಹತ್ಯೆಯನ್ನು ಆದೀಲ್ ಶಾ ಮಾಡಿದ್ರಾ? ಈ ಎಲ್ಲದರ ಕುರಿತು ಚರ್ಚೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.