ಮನೆಯಲ್ಲಿ ಭಗತ್ ಸಿಂಗ್ ಪಾತ್ರದ ಅಭ್ಯಾಸ – ನೇಣಿಗೆ ಕೊರಳು, ಬಾಲಕ ಸಾವು.
-ಚಿತ್ರದುರ್ಗದಲ್ಲಿ ಹೃದಯ ವಿದ್ರಾವಕ ಘಟನೆ
ಚಿತ್ರದುರ್ಗ: ಭಗತ್ ಸಿಂಗ್ (Bhagat Singh) ಪಾತ್ರವನ್ನು ಅಭ್ಯಾಸ ಮಾಡುತ್ತಿದ್ದ ವೇಳೆ ನಿಜವಾಗಿಯೂ ಬಾಲಕ ನೇಣಿಗೀಡಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿಜಯಂತಿ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಣ್ಣ ಮಕ್ಕಳು ದೇಶಕ್ಕಾಗಿ ಹೋರಾಡಿದ ವೀರ ಮಹಾನಿಯರ ವೇಷಧರಿಸಿ ನಾಟಕ, ನೃತ್ಯ, ಭಾಷಣ ಮಾಡುವುದನ್ನು ಶಾಲೆಗಳಲ್ಲಿ ನಾವು ನೋಡಿರುತ್ತೇವೆ.
ಇದೇ ರೀತಿ ಈ ಬಾರಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ (Karnataka Rajyotsava) ಪ್ರಯುಕ್ತ ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಬಾಲಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಸಂಜಯ್ ಗೌಡ(12) ಎಂದು ಗುರುತಿಸಲಾಗಿದೆ.
ಎಸ್‌ಎಲ್‌ವಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಸಂಜಯ್, ಭಗತ್ ಸಿಂಗ್ ಪಾತ್ರದಲ್ಲಿ ಅಭಿನಯಿಸಲು ಭಾರೀ ಸಿದ್ಧತೆ ನಡೆಸುತ್ತಿದ್ದ, ಮನೆಗೆ ಬಂದ ಬಳಿಕವೂ ಶನಿವಾರ ರಿಹರ್ಸಲ್‌ಗೆ ಮುಂದಾಗಿದ್ದ ಸಂಜಯ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದಾನೆ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಮಂಚದಿಂದ ಜಿಗಿದಿದ್ದಾನೆ. ಜಿಗಿದ ರಭಸಕ್ಕೆ ಸ್ಥಳದಲ್ಲಿಯೇ ಸಂಜಯ್ ಸಾವನ್ನಪ್ಪಿದ್ದಾನೆ.
ನಂತರ ಮನೆಗೆ ಬಂದ ಪೋಷಕರು ಮಗ ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೀಗ ಈ ಸಂಬಂಧ ಚಿತ್ರದುರ್ಗ ಬಡಾವಣೆ ಠಾಣೆಗೆ ಸಂಜಯ್ ಪೋಷಕರು ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.