ಬ್ರಿಸ್ಬೇನ್: ಕಳೆದ ರವಿವಾರ ಭಾರತ ಮತ್ತು ಪಾಕಿಸ್ಥಾನ ನಡುವೆ ಮೆಲ್ಬರ್ನ್ ನಲ್ಲಿ ಅತ್ಯಂತ ರೋಮಾಂಚನಕಾರಿ ಪಂದ್ಯ ನಡೆದಿದ್ದರೆ, ಈ ರವಿವಾರ ಬ್ರಿಸ್ಬೇನ್ ನ ಗಾಬ್ಬಾದಲ್ಲಿ ಮತ್ತೊಂದು ಅತ್ಯಂತ ರೋಚಕ ಪಂದ್ಯಕ್ಕೆ ಟಿ20 ವಿಶ್ವಕಪ್ ನಡೆಯಿತು. ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ನಡುವೆ ನಡೆದ ಪಂದ್ಯದಲ್ಲಿ ಬಾಂಗ್ಲಾ ಮೂರು ವಿಕೆಟ್ ಅಂತರದಿಂದ ಜಯಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದರೆ, ಜಿಂಬಾಬ್ವೆ ಎಂಟು ವಿಕೆಟ್ ನಷ್ಟಕ್ಕೆ 147 ರನ್ ಅಷ್ಟೇ ಗಳಿಸಲು ಶಕ್ತವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾ ದೇಶಕ್ಕೆ ಆರಂಭಿಕ ಆಟಗಾರ ಶಂಟೋ ಅರ್ಧಶತಕದ ನೆರವು ನೀಡಿದರು. 55 ಎಸೆತ ಆಡಿದ ಶಂಟೋ 71 ರನ್ ಗಳಿಸಿದರೆ, ಅಫಿಫ್ ಹುಸೈನ್ 29 ರನ್, ಶಕೀಬ್ 23 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಜಿಂಬಾಬ್ವೆಗೆ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ತಂಡವನ್ನು ಆಧರಿಸಿದ ಸೀನ್ ವಿಲಿಯಮ್ಸ್ 64 ರನ್ ಗಳಿಸಿದರು. ರಿಯಾನ್ ಬುರ್ಲ್ 27 ರನ್ ಗಳಿಸಿದರು.
ಕೊನೆಯ ಓವರ್ ನಲ್ಲಿ ಗೆಲುವಿಗೆ 16 ರನ್ ಅಗತ್ಯವಿತ್ತು. ಮೊಸದಿಕ್ ಹುಸೈನ್ ಎಸೆದ ಓವರ್ ನ ಮೊದಲ ಎಸೆತದಲ್ಲಿ ಬುರ್ಲ್ ಸಿಂಗಲ್ ತೆಗೆದರು. ಎರಡನೇ ಎಸೆತಕ್ಕೆ ಇವಾನ್ಸ್ ಔಟ್. ಮೂರನೇ ಎಸೆತಕ್ಕೆ ಎಂಗರವಾ ಲೆಗ್ ಬೈ ಮೂಲಕ ನಾಲ್ಕು ರನ್ ಗಳಿಸಿದರು. ನಾಲ್ಕನೇ ಎಸೆತಕ್ಕೆ ಭರ್ಜರಿ ಸಿಕ್ಸರ್. ಎರಡು ಎಸೆತಕ್ಕೆ ಐದು ರನ್ ಬೇಕಾಗಿದ್ದಾಗ ಎಂಗರವ ಔಟ್. ಕೊನೆು ಎಸೆತಕ್ಕೆ ಬ್ಯಾಟಿಂಗ್ ಗೆ ಬಂದ ಬ್ಲೆಸಿಂಗ್ ಮುಜುರಬಾನಿ ಸ್ಟಂಪೌಟಾದರು. ಬಾಂಗ್ಲಾ ಆಟಗಾರರು ಸೆಲೆಬ್ರೇಶನ್ ಮಾಡಿದರು. ಆದರೆ ಅಂಪೈರ್ ನೋಬಾಲ್ ನೀಡಿದರು.
ಬಾಂಗ್ಲಾ ವಿಕೆಟ್ ಕೀಪರ್ ನೂರುಲ್ ಔಟ್ ಮಾಡುವ ಭರದಲ್ಲಿ ಸ್ಟಂಪ್ ಗಿಂತ ಮುಂದೆ ಚೆಂಡನ್ನು ಕಲೆಕ್ಟ್ ಮಾಡಿ ಔಟ್ ಮಾಡಿದರು. ಇದು ನಿಯಮ ಬಾಹಿರ. ಅಂಪೈರ್ ನೋ ಬಾಲ್ ನೀಡಿದರು. ಆದರೆ ಮತ್ತೆಯೂ ಬ್ಲೆಸಿಂಗ್ ಮುಜುರಬಾನಿ ರನ್ ಗಳಿಸಲು ವಿಫಲರಾದರು.
ಬಾಂಗ್ಲಾ ದೇಶ ತಂಡವು ಕೊನೆಗೂ ಮೂರು ರನ್ ಅಂತರದ ಜಯ ಸಾಧಿಸಿತು.
.