ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿ; ನಂಜಾವಧೂತ ಸ್ವಾಮೀಜಿ
ಮಂಡ್ಯ, ಅಕ್ಟೋಬರ್, 28: ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಂಜವಧೂತ ಸ್ವಾಮೀಜಿ ಮದ್ದೂರಿನಲ್ಲಿ ಎಚ್ಚರಿಸಿದರು.
ಪಟ್ಟಣದ ನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗ ಸಂಘ ಸಮುದಾಯದ ಮಕ್ಕಳು ಮತ್ತು ಉದ್ಯೋಗ ಮೀಸಲಾತಿಗೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರ ಎಲ್ಲಾ ಸಮುದಾಯಗಳನ್ನು ಒಂದೇ ದೃಷ್ಟಿಕೋನದಿಂದ ನೋಡಬೇಕು. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿ ಅವರ ಪ್ರಗತಿಗೂ ಸಹಕಾರ ನೀಡಬೇಕು. ಒಕ್ಕಲಿಗರು ಸೌಮ್ಯ ಸ್ವಾಭಾವದವರಾಗಿದ್ದಾರೆ. ಹಠ ಹಿಡಿದರೆ ಸಾಧಿಸುವವರೆಗೂ ಬಿಡುವವರಲ್ಲ ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಮೀಸಲಾತಿ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ; ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿ ಒಕ್ಕಲಿಗ ಸಮುದಾಯವನ್ನು ಸಾಗಾಕುವ ಕೆಲಸ ಮಾಡಬಾರದು. ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಮೀಸಲಾತಿ ಕೊಡಲೇಬೇಕು ಎಂದು ತೀರ್ಮಾನಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು. ಇದಕ್ಕೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಒಕ್ಕಲಿಗ ನಾಯಕರು ಒತ್ತಡ ಹೇರಬೇಕು. ಮುಂದಿನ ವಿಧಾನಸಭಾ ಚುನಾವಣೆ ನಂತರ ಒಕ್ಕಲಿಗ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸುವುದು ದೈವ ಲಿಖಿತವಾಗಿದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಒಕ್ಕಲಿಗ ನಾಯಕರು ಚುನಾವಣೆ ನಂತರ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಭವಿಷ್ಯ ನುಡಿದರು.
30 ವರ್ಷಗಳಿಂದ ಮೀಸಲಾತಿ ಹೋರಾಟ; ಒಕ್ಕಲಿಗ ಜನಾಂಗದ ಮೀಸಲಾತಿ ಬೇಡಿಕೆ ನಿನ್ನೆ ಮೊನ್ನೆಯದಲ್ಲ, ಕಳೆದ 30 ವರ್ಷಗಳಿಂದ ಮೀಸಲಾತಿಯ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಆದರೆ ಮೀಸಲಾತಿ ವಿಚಾರದಲ್ಲಿ ಗಂಡೆದೆ ತೋರುವ ಧೈರ್ಯ ಜನಾಂಗದ ಯಾವ ನಾಯಕರಿಗೂ ಇಲ್ಲವಾಗಿದೆ. ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಒಕ್ಕಲಿಗ ಜನಾಂಗದವರಿಗೆ ಅನ್ಯಾಯ ಆಗುತ್ತಿದೆ. ತಳ ಮಟ್ಟದಲ್ಲಿ ಜನಾಂಗಕ್ಕೆ ರಾಜಕೀಯ ಮೀಸಲಾತಿ ಇಲ್ಲವಾಗಿದೆ. ಶೈಕ್ಷಣಿಕವಾಗಿ ನಮ್ಮ ಮಕ್ಕಳು ಕೂಡ ಅನೇಕ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ ಪೀಳಿಗೆಗೆ ನಾವು ಯಾವುದೇ ಉತ್ತರ ನೀಡಲು ಸಾಧ್ಯವಾಗದ ಸಂಕಷ್ಟ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದರು.
ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕಲಿಗ ಸಮುದಾಯಕ್ಕೆ, ನಗರ ಪ್ರದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಒಕ್ಕಲಿಗರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ನಮ್ಮ ಬೇಡಿಕೆಯನ್ನು ಸರ್ಕಾರ ಕೇವಲ ಬೇಡಿಕೆ ಎಂದು ಪರಿಗಣಿಸಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಕರವೇ ರಾಜ್ಯಾಧ್ಯಕ್ಷ ರಮೇಶ್ಗೌಡ, ಕೆಪಿಸಿಸಿ ಸದಸ್ಯ ಎಸ್. ಗುರುಚರಣ್ ಹೇಳಿದ್ದಾರೆ