ಸಕಲೇಶಪುರ: ನಿಡನೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿರುವ ದೇವರಾಜ್ ಎಂಬುವರು ಆಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 2 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಗಾಯಾಳು ದೇವರಾಜ್ ರವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚಿಕಿತ್ಸೆಗೆ ನೆರವಾಗಲು ಮುಂದಾಗಿಲ್ಲವೆಂದು ಗಾಯಾಳುವಿನ ಕುಟುಂಬಸ್ಥರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿರಂತರ ನ್ಯೂಸ್ ನಲ್ಲಿ ಕುಟುಂಬಸ್ಥರ ನೋವನ್ನು ಕುರಿತು ವರದಿ ಮಾಡಲಾಗಿತ್ತು. ನಿರಂತರ ನ್ಯೂಸ್ ನ ವರದಿಯನ್ನು ತಿಳಿದ ಶಾಸಕರು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಅವರಿಗೆ ವೈಯುಕ್ತಿಕ ಧನ ಸಹಾಯ ಮಾಡಿ ವೈದ್ಯರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಈ ಸಂಧರ್ಭದಲ್ಲಿ ನಿರಂತರ ನ್ಯೂಸ್ ನೊಂದಿಗೆ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ ಗಾಯಾಳುವಿಗೆ ಗುಣಮಟ್ಟದ ಚಿಕಿತ್ಸೆ ಕೊಡಬೇಕೆಂಬ ದೃಷ್ಠಿಯಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ್ ರವರೊಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಕೋರಲಾಗಿದೆ. ಇದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಅರಣ್ಯ ಇಲಾಖೆಯೆ ಭರಿಸುತ್ತದೆಂದು ಹೇಳಿದರು.