ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ ಅವರಿಗೆ ಮಾವನಾದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಭಿನಂದಿಸಿದ್ದಾರೆ. ನಾರಾಯಣ ಮೂರ್ತಿ ಅವರು ತಮ್ಮ ಅಳಿಯ ರಿಷಿ ಸುನಕ್ ಅವರು ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಬಗ್ಗೆ ತಮ್ಮ ಮೊದಲ ಹೇಳಿಕೆಯಲ್ಲಿ, ʼನಾನು ಅವರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ ಮತ್ತು ಅವರಿಗೆ ಯಶಸ್ಸನ್ನು ಬಯಸುತ್ತೇನೆʼ ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ರಿಷಿಗೆ ಅಭಿನಂದನೆಗಳು. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ನಾವು ಅವರ ಯಶಸ್ಸನ್ನು ಬಯಸುತ್ತೇವೆ” ಎಂದು ಮೂರ್ತಿ ಪಿಟಿಐಗೆ ಇಮೇಲ್ ಮಾಡಿದ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಪೆನ್ನಿ ಮೊರ್ಡಾಂಟ್ ಸೋಮವಾರ ಪ್ರಧಾನಿ ರೇಸ್‌ನಿಂದ ಹೊರಬಿದ್ದ ನಂತರ ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಂನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾಗಲಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಅವರು 5 ನೇ ಯುಕೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಭಾರತೀಯ ಮೂಲದವರಾಗಿರುವ ರಿಷಿ ಸುನಕ್ ನಾರಾಯಣ ಮೂರ್ತಿಯವರ ಮಗಳು ಅಕ್ಷತಾ ಅವರನ್ನು 2009 ರಲ್ಲಿ ವಿವಾಹವಾದರು. ಸುನಕ್ ದಂಪತಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.