ಸಕಲೇಶಪುರ: ಗುತ್ತಿಗೆದಾರರು ಹಾಗೂ ಇಂಜಿನಿಯರ್ ನಿರ್ಲಕ್ಷ್ಯಕ್ಕೆ ಪಟ್ಟಣದ ಪ್ರೇಮನಗರ ಬಡಾವಣೆಯಲ್ಲಿ ನಿರ್ಮಾಣವಾಗಿದ್ದ ತಡೆಗೋಡೆ ಮಣ್ಣುಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ವಾರ್ಡ್ ನಂ 11 ಪ್ರೇಂನಗರ ಬಡಾವಣೆಯಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಕೊಳಚೆ ನಿರ್ಮೂಲನ ಮಂಡಳಿಯಿಂದ 20ಲಕ್ಷ ಹಾಗೂ ಪುರಸಭೆಯಿಂದ 8ಲಕ್ಷ ರೂಗಳು ಬಿಡುಗಡೆಯಾಗಿ ಕೊಳಚೆ ನಿರ್ಮೂಲನ ಮಂಡಳಿಯ ಅನುದಾನದ ಕಾಮಗಾರಿ ಮುಗಿದು ಪುರಸಭೆಯಿಂದ ಬಿಡುಗಡೆಯಾದ ಬಾಕಿ 8ಲಕ್ಷದ ಕಾಮಗಾರಿ ನಡೆಯುತ್ತಿತ್ತು.
ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಆರೋಪಿಸಿ ಖುದ್ದು ಪುರಸಭೆ ಅಧ್ಯಕ್ಷ ಕಾಡಪ್ಪ ಹಾಗೂ ತಡೆಗೋಡೆ ಕೆಳಗಿರುವ ಮನೆಯವರು ಎರಡು ದಿನಗಳ ಹಿಂದೆ ಈ ಕಾಮಗಾರಿಯ ಉಪಗುತ್ತಿಗೆ ಪಡೆದವರ ಜಗಳವಾಡಿದ್ದು ಇದಾದ ಎರಡೇ ದಿನಗಳಲ್ಲಿ ತಡೆಗೋಡೆ ಉರುಳಿದೆ. ಅದೃಷ್ಟವಷಾತ್ ಕೆಳಗಿರುವ ಮನೆಯ ಅರ್ಧ ಅಡಿ ಹಿಂಭಾಗಕ್ಕೆ ಬಿದ್ದಿದ್ದು ಮತ್ತಷ್ಟು ಅಪಾಯವಾಗದಂತೆ ಜೆಸಿಬಿಗಳನ್ನು ನಿಲ್ಲಿಸಿ ತಡೆಗೋಡೆ ಕುಸಿತವಾಗುವುದನ್ನು ತಡೆಯಲಾಗಿದೆ. ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಹಾಗೂ ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಈ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕಟ್ಟಲಾಗಿದ್ದ ತಡೆಗೋಡೆಗೆ ಪುರಸಭೆಯವರು ಮತ್ತೆ 8 ಅಡಿ ಎತ್ತರಕ್ಕೆ ಕಟ್ಟಲು ಇಂಜಿನಿಯರ್ ಅನುಮತಿ ಕೊಟ್ಟಿರುವುದು ಆಶ್ಚರ್ಯಕರವಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾಮಗಾರಿಗೆ ಸಂಭಂಧ ಪಟ್ಟ ಎಲ್ಲಾ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗಳ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಘಟನಾ ಸ್ಥಳಕ್ಕೆ ಪುರಸಭಾ ಅಧ್ಯಕ್ಷ ಕಾಡಪ್ಪ ಆಗಮಿಸಿ ಮಾತನಾಡಿ ಗುತ್ತಿಗೆದಾರರು ಹಾಗೂ ಅಭಿಯಂತರರ ನಿರ್ಲಕ್ಷ್ಯ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಈ ಕುರಿತು ಉನ್ನತ ಅಧಿಕಾರಿಗಳಿಂದ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪುರಸಭಾ ನಾಮ ನಿರ್ದೇಶಿತ ಸದಸ್ಯ ದೀಪಕ್ ಮಾತನಾಡಿ ರಾಜ್ಯ ಸರ್ಕಾರ ಪಟ್ಟಣದ ಅಭಿವೃದ್ದಿಗೆ ಕೋಟ್ಯಾಂತರ ರೂ ಹಣ ನೀಡಿದ್ದರು ಸಹ ಸದುಪಯೋಗ ಆಗುತ್ತಿಲ್ಲ. ಪುರಸಭೆಯಲ್ಲಿ ಕಾಯಂ ಇಂಜಿನಿಯರ್ ಇಲ್ಲ, ಈ ಕಾಮಗಾರಿಯ ಕುರಿತು ಯಾರು ಉಸ್ತುವಾರಿ ವಹಿಸಿದ್ದರೋ ಅವರೆ ನೇರ ಹೊಣೆ. ಪುರಸಭೆಯ ಭ್ರಷ್ಟಚಾರದ ವಿರುದ್ದ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಗುತ್ತದೆ ಎಂದಿದ್ದಾರೆ.