ಸಕಲೇಶಪುರ : ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು ಕಾಡಾನೆಗಳ ಹಾವಳಿಗೆ ಭಾರಿ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ತಾಲ್ಲೂಕಿನ ಕೆಲವಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬೆಳಗೋಡು ಹೋಬಳಿಯ ಕೆಲವಳ್ಳಿ ಗ್ರಾಮದ ಕೆ.ಎನ್ ಮಂಜುನಾಥ್ ಎಂಬುವವರ ಕಾಫಿ ತೋಟದಲ್ಲಿ ಕಾಡಾನೆ ಹಾಗೂ ಮರಿಯಾನೆಯೊಂದು ದಾಂದಲೆ ನಡೆಸುತ್ತಿದ್ದು ಇದರಿಂದ ಫಸಲಿಗೆ ಬಂದಿದ್ದ ಕಾಫಿ, ಮೆಣಸಿನ ಗಿಡಗಳು, ಬಾಳೆಗಿಡಗಳು ನೆಲಸಮವಾಗಿವೆ. ಮೋಟಾರ್ ವೈರ್ ಹಾಗೂ ಎರಡು ಡ್ರಮ್ ಗಳನ್ನು ಸಹ ಪುಡಿ ಮಾಡಿಹಾಕಿದೆ. ಬೆಳೆ ನಷ್ಟದಿಂದ ತೋಟದ ಮಾಲೀಕ ಕಂಗಾಲಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಮಂಜುನಾಥ್ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕಾಫಿ ತೋಟದ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಶಕಗಳ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಲೆನಾಡು ಭಾಗದ ಜನ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.