Election 2023 | ಮುಂದಿನ ಚುನಾವಣೆಯಲ್ಲಿ 40 ಸೀಟು ಬಂದರೆ ನಾನು ಸಿಎಂ ಆಗಲ್ಲ: ಎಚ್.ಡಿ. ಕುಮಾರಸ್ವಾಮಿ
ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (Election 2023) ಜೆಡಿಎಸ್ ಗೆ 30-40 ಸ್ಥಾನ ಬಂದರೆ ನಾನು ಅಧಿಕಾರದಿಂದ ದೂರ ಇರುತ್ತೇನೆ. ಇದು ನನ್ನ ನಿರ್ಧಾರ. ನಮ್ಮಲ್ಲೇ ಯಾರಾದರೂ ಒಬ್ಬರನ್ನು ಆ ಸ್ಥಾನದಲ್ಲಿ ಕೂರಿಸಿ ನಾನು ಮಾರ್ಗದರ್ಶನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
30-40 ಸ್ಥಾನ ಬಂದರೂ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ. ಇದು ನನ್ನ ಗಟ್ಟಿ ನಿರ್ಧಾರ ಎಂದು ಸುದ್ದಿಗಾರರಿಗೆ ಮಾಜಿ ಸಿಎಂ ತಿಳಿಸಿದರು. ಅಲ್ಲದೆ, ಈಗಾಗಲೇ ಮೈಸೂರು ಭಾಗದ ಅಭ್ಯರ್ಥಿಗಳ ಬಹುತೇಕ ಪಟ್ಟಿ ಸಿದ್ಧವಿದೆ ಎಂದೂ ಅವರು ತಿಳಿಸಿದರು.
ಸಂಪೂರ್ಣ ಬಹುಮತ ಕೊಡಿ ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ. ಪಂಚರತ್ನ ಯೋಜನೆಗಳನ್ನು 5 ವರ್ಷಗಳಲ್ಲಿ ಅನುಷ್ಠಾನ ಮಾಡುತ್ತೇನೆ. ಕಾರ್ಯಕ್ರಮ ಅನುಷ್ಠಾನ ಮಾಡದೆ ಇದ್ದರೆ ನಾನು ಪಕ್ಷ ವಿಸರ್ಜನೆ ಮಾಡುತ್ತೇನೆ. ಚಾಮುಂಡಿ ಸನ್ನಿಧಾನದಲ್ಲಿ ನಿಂತು ಈ ಮಾತು ಹೇಳುತ್ತಿದ್ದೇನೆ. ಪಂಚ ರತ್ನ ಯೋಜನೆ ಅನುಷ್ಠಾನ ಆಗಬೇಕಾದರೆ ಸಮ್ಮಿಶ್ರ ಸರ್ಕಾರದಿಂದ ಸಾಧ್ಯವಿಲ್ಲ. ಸಂಪೂರ್ಣ ಬಹುಮತದಿಂದ ಮಾತ್ರ ಸಾಧ್ಯ. ಈ ಕಾರಣ ನಾನು ಸಮ್ಮಿಶ್ರ ಸರ್ಕಾರ ಸಂದರ್ಭ ಬಂದರೆ ಸಿಎಂ ಆಗುವುದಿಲ್ಲ ಎಂದು ಹೇಳುತ್ತಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.