ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ “ಜನಸ್ಪಂದನ” ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿದ್ದು, ಬಿಜೆಪಿ ಶಕ್ತಿ ಪ್ರದರ್ಶನ ಅನಾವರಣಗೊಂಡಿದೆ. ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ದಿವಂಗತ ಉಮೇಶ್ ಕತ್ತಿ ಮತ್ತು ಪ್ರವೀಣ್ ನೆಟ್ಟಾರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹಿರಿಯ ನಾಯಕರಾದ ಸದಾನಂದಗೌಡ, ಶೋಭಾ ಕರಂದ್ಲಾಜೆ, ಆರಗ ಜ್ಞಾನೇಂದ್ರ, ಎಂಟಿಬಿ ನಾಗರಾಜ್, ಮುನಿರತ್ನ, ಗೋಪಾಲಯ್ಯ, ಶ್ರೀರಾಮುಲು, ಅಂಗಾರ, ನಾರಾಯಣ ಸ್ವಾಮಿ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ಆರ್. ಅಶೋಕ್, ಬಿ.ವೈ.ವಿಜಯೇಂದ್ರ, ಬಿಡಿಎ ಅಧ್ಯಕ್ಷ ವಿಶ್ವನಾಥ್, ಬಿಜೆಪಿ ಶಾಸಕರು ಮತ್ತು ಸಂಸದರು ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.
ಸಮಾವೇಶ ಆರಂಭದಲ್ಲೇ ವೇದಿಕೆಯಲ್ಲಿ ಮಾತು ಆರಂಭಿಸಿದ ಡಾ.ಕೆ.ಸುಧಾಕರ್, ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಪರಮೋಚ್ಛ ನಾಯಕ ಎಂದು ಪ್ರತಿಪಾದಿಸಿದರು. ‘ಬಾಳಿಗೊಂದು ಎಲ್ಲೆ ಎಲ್ಲಿದೆ..’ ಎಂಬ ಹಾಡನ್ನು ಹೇಳುತ್ತಾ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಕನಸು ಎಂದೂ ಈಡೇರುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಹಾಸ್ಯಭರಿತವಾಗಿ ಹೇಳಿದರು.