ಅರಸೀಕೆರೆ ಅಪಘಾತ ಮೃತಪಟ್ಟ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಹಾರ ವಿತರಣೆ
ಹಾಸನ: ಅರಸೀಕೆರೆ ತಾಲೂಕು ಗಾಂಧಿನಗರ ಬಳಿ ಶನಿವಾರ ರಾತ್ರಿ ನಡೆದ ಭೀಕರ ದುರಂತದಲ್ಲಿ ಮೃತಪಟ್ಟ 9 ಮಂದಿ ಕುಟುಂಬಗಳಿಗೆ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ನೀಡಿದೆ.
ಪರಿಹಾರದ ಚೆಕ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಟುಂಬಗಳ ವಾರಸುದಾರರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಪಂ ಸಿಇಒ ಕಾಂತರಾಜು ಮೊದಲಾದವರಿದ್ದರು.ನಂತರ ಮಾತನಾಡಿದ ಗೋಪಾಲಯ್ಯ, ದುರಂತ ನಡೆದ ನಂತರ ಸಿಎಂಅವರು ತಲಾ 2 ಲಕ್ಷರೂ. ಪರಿಹಾರ ಘೋಷಣೆ ಮಾಡಿದ್ದರು. ಆದರೆ ಮೃತಪಟ್ಟವರ ಕುಟುಂಬಗಳ ಪರಿಸ್ಥಿತಿ ಹಾಗೂ ಸ್ಥಳೀಯ ಶಾಸಕರ ಮನವಿ ಮೇರೆಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ತಲಾ 5 ಲಕ್ಷರೂ. ಪರಿಹಾರ ನೀಡಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸುವುದಾಗಿ ಸಚಿವರು ಭರವಸೆ ನೀಡಿದರು. ಈ ಸಂಬಂಧ ಸಿಎಂ ಕಚೇರಿಯಿಂದ ಶೀಘ್ರ ಸೂಚನೆ ಹೊರ ಬೀಳಲಿದೆ ಎಂದರು.ಇದಕ್ಕೂ ಮುನ್ನ ಮಾತನಾಡಿದ ಶಿವಲಿಂಗೇಗೌಡ, ಮೃತರ ಕುಟುಂಬಕ್ಕೆ 2 ಲಕ್ಷ ಬದಲಿಗೆ 5 ಲಕ್ಷ ರೂ. ಪರಿಹಾರ ನೀಡಿರುವುದು ಸ್ವಾಗತಾರ್ಹ. ಇದಕ್ಕಾಗಿ ಸಚಿವರು ಹಾಗೂ ಮುಖ್ಯಮಂತ್ರಿ ಅವರಿಗೆ ಧನ್ಯವಾದ ಹೇಳುವೆ ಎಂದರು. ಇದೇ ವೇಳೆ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಅನೇಕರು ಕೂಲಿ ನಂಬಿ ಬದುಕುತ್ತಿದ್ದು, ಗಾಯಾಳುಗಳಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ದುರಂತ ನಡೆದ ಹೆದ್ದಾರಿ ಕಾಮಗಾರಿಯಲ್ಲಿ ಏನೇನು ಲೋಪಗಳಾಗಿವೆ ಎಂಬುದರ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಅವರೇ ನಿನ್ನೆ ಪರಿಶೀಲನೆ ನಡೆಸಿ ಸುಮಾರು ಎರಡೂ ವರೆ ಗಂಟೆಗಳ ಕಾಲ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ವೇಳೆ ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು ಶೀಘ್ರವೇ ಸರಿ ಪಡಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.