ಚಿಕ್ಕಮಗಳೂರು, ಅಕ್ಟೋಬರ್, 19: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಷ್ಟು ದಿನಗಳ ಕಾಲ ಆನೆಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಚಿರತೆಗಳ ಹಾವಳಿಯೂ ಹೆಚ್ಚಾಗಿದ್ದು, ಜನರು ಆತಂಕಗೊಂಡಿದ್ದರು. ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ರಮೇಶ್ ಎಂಬುವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ತೋಟದ ಮಾಲೀಕರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ
ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುವ ವೇಳೆ ಕಾಫಿ ಗಿಡಗಳ ಮಧ್ಯೆ ಚಿರತೆ ಇರುವುದು ಕಂಡುಬಂದಿದೆ. ಕೂಡಲೇ ಭಯಗೊಂಡ ಕಾರ್ಮಿಕರು ಕೆಲಸ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಚಿರತೆಯನ್ನ ಗಮನಿಸಿದ ತೋಟದ ಮಾಲೀಕ ರಮೇಶ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಹಾಕಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಿರತೆ ಗಾಯಗೊಂಡಿದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೂಡಿಗೆರೆ ಪಶು ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಚಿರತೆಯ ಆರೋಗ್ಯ ಸುಧಾರಿಸುವ ಲಕ್ಷಣ ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೃಗಾಲಯ ಅಥವಾ ಕಾಡಿಗೆ ಬಿಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾಫಿ ತೋಟದ ಮಧ್ಯೆ ಅವಿತಿದ್ದ ಚಿರತೆ ಕೂಲಿ ಕಾರ್ಮಿಕರನ್ನು ನೋಡಿದರೂ ಕೂಡ ದಾಳಿ ಮಾಡಿಲ್ಲ. ಚಿರತೆ ಗಾಯಗೊಂಡಿದ್ದರಿಂದ ದಾಳಿಗೆ ಮುಂದಾಗಿಲ್ಲ ಎಂದು ಹೇಳಲಾಗಿದೆ. ವಲಯ ಅರಣ್ಯ ಇಲಾಖೆ ಅಧಿಕಾರಿ ಮೋಹನ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಚೇತನ್, ಶಿವಕುಮಾರ್, ಗಾರ್ಡ್ಗಳಾದ ಕುಮಾರ್, ಗಿರೀಶ್, ಮೌಸೀಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜನರಲ್ಲಿ ಆತಂಕ ಮೂಡಿಸಿದ ಚಿರತೆ
ಕಾಡಾನೆಗಳ ದಾಳಿಯಿಂದ ಮಳೆನಾಡಿನ ಭಾಗದ ಜನರು ತತ್ತರಿಸಿ ಹೋಗಿದ್ದರು. ಹಾಗೆಯೇ ಅರಣ್ಯ ಇಲಾಖೆ ಹಾಗೂ ಜಮೀನು ಮಾಲೀಕರ ನಡುವೆ ಹೋರಾಟಗಳು ನಡೆಯುತ್ತಿದ್ದವು. ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆಗಳನ್ನು ಕಳೆದುಕೊಂಡ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕಾಫಿನಾಡಿನಲ್ಲಿ ಆನೆಗಳ ದಾಳಿ ಇದೇ ಮೊದಲೇನಲ್ಲ. ಹಿಂದಿನಿಂದಲೂ ಸಹ ಆನೆಗಳ ದಾಳಿ ಆಗುತ್ತಿದ್ದು, ರೈತರು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ನಮಗೆ ಕಾಡಾನೆ ದಾಳಿಯಿಂದ ಮುಕ್ತಿ ಕೊಡಸಿ ಎಂದು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಅಷ್ಟರಲ್ಲೇ ಇದೀಗ ಚಿರತೆಗಳು ಕೂಡ ನಾಡಿನತ್ತ ಲಗ್ಗೆ ಇಡುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದಂತಾಗಿದೆ.