ವೇತನದ ಚೆಕ್ ವಿತರಿಸಿದ ಶಾಸಕ ಸಿಮೆಂಟ್ ಮಂಜು
ಆಲೂರು: ತಂದೆಯ ಅಕಾಲಿಕ ನಿಧನದಿಂದ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬದ ಯುವತಿಗೆ ತಾಲೂಕು ಆಸ್ಪತ್ರೆಯಲ್ಲಿ ಉದ್ಯೋಗ ಕಲ್ಪಿಸಿ, ಮೊದಲ ತಿಂಗಳ ವೇತನದ ಚೆಕ್ ಅನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದ ನವೀದ್ ಪಾಷಾ ಅವರ ಪುತ್ರಿ ಜವೇರಿಯಾ ಅವರಿಗೆ ಶಾಸಕರು ವೇತನದ ಚೆಕ್ ಹಸ್ತಾಂತರಿಸಿದರು. ನವೀದ್ ಪಾಷಾ ಅವರು ಬಡ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದವರಾಗಿದ್ದು, ಅವರ ದಿಡೀರ್ ಸಾವಿನಿಂದ ಕುಟುಂಬ ಆರ್ಥಿಕವಾಗಿ ಕಂಗಾಲಾಗಿತ್ತು.
ಕುಟುಂಬದ ಪರಿಸ್ಥಿತಿಯನ್ನು ಮನಗಂಡು ಶಾಸಕ ಸಿಮೆಂಟ್ ಮಂಜು ಅವರ ಸೂಚನೆಯ ಮೇರೆಗೆ ನವೀದ್ ಪಾಷಾ ಅವರ ಪುತ್ರಿಗೆ ತಾಲೂಕು ಆಸ್ಪತ್ರೆಯಲ್ಲಿ ಉದ್ಯೋಗ ನೀಡಲಾಗಿತ್ತು. ಕೆಲಸಕ್ಕೆ ಸೇರಿದ ಒಂದು ತಿಂಗಳ ನಂತರ ಮೊದಲ ತಿಂಗಳ ವೇತನದ ಚೆಕ್ ಅನ್ನು ಶಾಸಕರಿಂದಲೇ ಪಡೆಯಬೇಕೆಂದು ಯುವತಿ ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಶಾಸಕರು ಸ್ವತಃ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.



