Tuesday, November 18, 2025
Homeಸುದ್ದಿಗಳುಸಕಲೇಶಪುರಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಆನೆಮಹಲ್ ಹಸೈನಾರ್

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಆನೆಮಹಲ್ ಹಸೈನಾರ್

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಆನೆಮಹಲ್ ಹಸೈನಾರ್ 

ಸಕಲೇಶಪುರ: ತಾಲ್ಲೂಕಿನ ಆನೆಮಹಲ್ ಗ್ರಾಮದ ಹಸೈನಾರ್ ಆನೆಮಹಲ್ ಅವರು ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಆನೆಮಹಲ್‌ನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಹಸೈನಾರ್ ಹಾಗೂ ಅವರೊಂದಿಗೆ ಬಂದ ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಸ್ವಾಗತ ನೀಡಿದರು.

ಹಸೈನಾರ್ ಆನೆಮಹಲ್ ಅವರು ಆನೆಮಹಲ್ ಗ್ರಾಮ ಪಂಚಾಯತ್‌ನಲ್ಲಿ ಎರಡು ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಹಾಸನ ಜಿಲ್ಲಾ ವಕ್ಫ್ ಸಮಿತಿಯಲ್ಲಿ ಮೂರು ಅವಧಿಗೂ ಉಪಾಧ್ಯಕ್ಷ ಮತ್ತು ಸದಸ್ಯರ ಜವಾಬ್ದಾರಿಯನ್ನು ವಹಿಸಿದ್ದರು. ಅಲ್ಲದೆ ಮಂಜರಾಬಾದ್ ದರ್ಗಾ ಮತ್ತು ಅನಾಥಾಶ್ರಮ ಸೇರಿದಂತೆ ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ದೇಶ ಹಾಗೂ ರಾಜ್ಯದ ವಿವಿಧ ವರ್ಗಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡುವ ಪಕ್ಷ ಜಾತ್ಯತೀತ ಮೌಲ್ಯಗಳನ್ನು ಉಳಿಸಿಕೊಂಡಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಗೆಲುವು–ಸೋಲು ಸಾಮಾನ್ಯವೆಂದರೂ, ಜನಾಧಾರವನ್ನು ಕಾಪಾಡುವುದು ಮತ್ತು ಜನಪರ ಕೆಲಸಗಳನ್ನು ಮುಂದುವರಿಸುವುದೇ ಪಕ್ಷದ ಗುರಿ ಎಂದು ಅವರು ಅಭಿಪ್ರಾಯಪಟ್ಟರು.

ವಿರೋಧ ಪಕ್ಷದ ಟೀಕೆಗಳ ವಿಷಯದಲ್ಲೂ ಅವರು ಪ್ರತಿಕ್ರಿಯಿಸಿದ್ದು, ಸರ್ಕಾರ ಘೋಷಿಸಿದ ಯೋಜನೆಗಳು ಜನರಿಗೆ ತಲುಪುತ್ತಿರುವುದು ತಮಗೆ ವಿಶ್ವಾಸ ನೀಡುತ್ತಿದೆ ಎಂದರು. 2028ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯತೆಗಳು ಇರುವುದಾಗಿ ಅವರು ಅಭಿಪ್ರಾಯಪಟ್ಟರು.

ಕ್ಷೇತ್ರದ ಸ್ಥಳೀಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷದ ಮುಖಂಡರು ಸದಾ ಲಭ್ಯರಾಗಿದ್ದಾರೆ ಎಂದು ತಿಳಿಸಿದರು. ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವರಿಂದ ತಪ್ಪುಮಾಹಿತಿ ಹರಡುವ ಪ್ರಯತ್ನಗಳು ನಡೆದರೂ, ಜನರು ನಿಜವಾದ ಕಾರ್ಯಕ್ಷಮತೆಯನ್ನು ಗಮನಿಸಿ ತೀರ್ಮಾನ ತೆಗೆದುಕೊಳ್ಳುವರು ಎಂದೂ ಹೇಳಿದ್ದಾರೆ.

ಕ್ಷೇತ್ರದ ಕಳೆದ ಕೆಲವು ವರ್ಷಗಳ ಬೆಳವಣಿಗೆ–ಪ್ರವೃತ್ತಿಗಳನ್ನು ಸರಿಯಾದ ಸಮಯದಲ್ಲಿ ಸಾರ್ವಜನಿಕರ ಮುಂದೆ ವಿವರಿಸುವುದಾಗಿ ಹೇಳಿದರು.

ಹಸೈನಾರ್ ಆನೆಮಹಲ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂಘಟನೆ ಬಲಪಡಿಸಲು ನೆರವಾಗಲಿದೆ ಎಂದು ಅಭಿಪ್ರಾಯಿಸಿಕೊಂಡರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರ್‌ಮುಡಿ ಚಂದ್ರು ಅವರು, ಹಸೈನಾರ್ ಸೇರ್ಪಡೆಯಿಂದ ಪಕ್ಷಕ್ಕೆ ತಾಲ್ಲೂಕಿನಲ್ಲಿ ಹೊಸ ಬಲ ದೊರೆಯಲಿದೆ ಎಂದು ಹೇಳಿದರು.

ಸೇರ್ಪಡೆಗೆ ಬಂದ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಗಿದ್ದು, ಪಕ್ಷದ ಕಾರ್ಯಕ್ರಮಗಳು ಮತ್ತು ತತ್ತ್ವಗಳನ್ನು ಜನರಿಗೆ ತಲುಪಿಸುವಲ್ಲಿ ಇವರ ನೆರವು ಮಹತ್ವದ್ದಾಗಲಿದೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.

ಹಸೈನಾರ್ ಆನೆಮಹಲ್ ಅವರೊಂದಿಗೆ ನಾಗರಾಜು, ಪುವಪ್ಪ, ಶರೀಫ್, ಅಂಗಜ, ಹನೀಫ್, ಇಬ್ರಾಹಿಂ, ನಝೀರ್ ಬಾವು, ಸಲೀಂ, ಕುಮಾರ, ರೋಬರ್ಟ್, ಅಲಿಂ, ಹಬೀಬ್, ಶಂಸುದ್ದೀನ್, ಸಿದ್ದೀಕ್, ಮೋನು, ಸಾದಿಕ್, ಖಾಸಿಂ, ಉಮ್ಮರ್, ಲತೀಫ್, ಇಲ್ಯಾಸ್, ತೌಸಿಫ್ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಸಯ್ಯದ್ ಮುಫೀಜ್, ಉದಯ್, ಲೋಕೇಶ್, ಅಲ್ಪಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ಹನೀಫ್, ಹಾರಿಶ್, ಪೋಕರ್ ಹಾಜಿ, ಪ್ರಶಾಂತ್, ಹಿತೈಷಿ, ಅಶೋಕ, ತಿಮ್ಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular