ಸಕಲೇಶಪುರ: ತಾಲೂಕಿನ ಪ್ರಸಿದ್ಧ ಟಿಂಬರ್ ವ್ಯಾಪಾರಸ್ಥರು ಹಾಗೂ ಸಮಾಜಮುಖಿ ವ್ಯಕ್ತಿಗಳಾದ ಟಿಂಬರ್ ಅಸ್ಮತ್ (82) ಅವರು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ನಿನ್ನೆ ರಾತ್ರಿ ನಿಧನರಾದರು.
ಟಿಂಬರ್ ಉದ್ಯಮದಲ್ಲಿ ತಮ್ಮ ಶ್ರಮ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ವಿಶಿಷ್ಟ ಸ್ಥಾನ ಗಳಿಸಿದ್ದ ಅವರು, ವ್ಯಾಪಾರ ಕ್ಷೇತ್ರದಲ್ಲಿ ಅನೇಕರಿಗೆ ಮಾದರಿಯಾಗಿದ್ದರು. ರಾಜಕೀಯವಾಗಿ ದೇವೇಗೌಡರ ಕುಟುಂಬದೊಂದಿಗೆ ಆಪ್ತ ಸಂಬಂಧ ಹೊಂದಿದ್ದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಹತ್ತಿರದ ಆತ್ಮೀಯತೆ ಬೆಳೆಸಿಕೊಂಡಿದ್ದರು. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟಿಂಬರ್ ಅಸ್ಮತ್ ಅವರ ಮನೆಗೆ ಭೇಟಿ ನೀಡಿದ್ದರು.
ಮೃತರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 1 ಗಂಟೆಗೆ ಈದ್ಗಾ ಮೈದಾನದಲ್ಲಿರುವ ಕಬ್ರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಅವರು ಟಿಂಬರ್ ಅಸ್ಮತ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ, ಅವರು ಸಮಾಜಕ್ಕೆ ಮಾಡಿದ ಸೇವೆ ಮರೆಯಲಾಗದು. ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದರು.



