ಸಕಲೇಶಪುರದಲ್ಲಿ ನಾಳೆ ಬಿಜೆಪಿ ವತಿಯಿಂದ ಬೃಹತ್ ರಕ್ತದಾನ ಶಿಬಿರ
ಸಕಲೇಶಪುರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಪಾಕ್ಷಿಕದಡಿ ನಾಳೆ (ಗುರುವಾರ) ಸಕಲೇಶಪುರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ತಿಳಿಸಿದ್ದಾರೆ.
ಪಟ್ಟಣದ ಹಳೆ ಬಸ್ ನಿಲ್ದಾಣ ಸಮೀಪ ತಾಲೂಕು ಬಿಜೆಪಿ ಹಾಗೂ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಲಿದೆ. ಈ ರಕ್ತದಾನ ಶಿಬಿರವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಲಿದ್ದಾರೆ.
ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ವಿವಿಧ ಸೇವಾ ಚಟುವಟಿಕೆಗಳನ್ನು ಬಿಜೆಪಿ ವತಿಯಿಂದ ಆಯೋಜಿಸಲಾಗುತ್ತಿದ್ದು, ಇದರಲ್ಲಿ ರಕ್ತದಾನ ಶಿಬಿರವೂ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ಅಶ್ವಥ್ ಹೇಳಿದರು.
“ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದ್ದು, ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು” ಎಂದು ಅಶ್ವಥ್ ಮನವಿ ಮಾಡಿದ್ದಾರೆ.



