“ತಾಲೂಕಿನಲ್ಲಿ ಬಿಜೆಪಿ ಸದೃಢ – ಕಾಂಗ್ರೆಸ್ ಸೇರ್ಪಡೆ ಸುದ್ದಿಗೆ ಬಿಜೆಪಿ ಅಧ್ಯಕ್ಷ ಅಶ್ವಥ್ ಸ್ಪಷ್ಟನೆ”
ಸಕಲೇಶಪುರ:ತಾಲೂಕಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಅನಿವಾರ್ಯತೆ ಎಲ್ಲಿಯೂ ಎದುರಾಗಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಸ್ಪಷ್ಟನೆ ನೀಡಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗಿರುವ “ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ” ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಅವರು ಹೇಳಿದರು.
ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸುದ್ದಿ ಪ್ರಕಟಕ್ಕೆ ತಾಲೂಕು ಬಿಜೆಪಿ ಅಧ್ಯಕ್ಷರು ಸ್ಪಷ್ಟನೆ ನೀಡಿ ಮಾತನಾಡಿದ ಅವರು,
ತಾಲೂಕಿನಲ್ಲಿ ಬಿಜೆಪಿ ಸದೃಢವಾಗಿ ನಿಂತಿದೆ. ಶಾಸಕ ಸಿಮೆಂಟ್ ಮಂಜು ಅವರ ಜನಪ್ರಿಯತೆ, ಸರಳತೆ ಮತ್ತು ಕಾರ್ಯವೈಖರಿಯನ್ನು ಮೆಚ್ಚಿ ಎಲ್ಲಾ ಧರ್ಮ, ಎಲ್ಲಾ ಜಾತಿಯ ಮತದಾರರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಮತದಾರರಲ್ಲಿ ಬಿಜೆಪಿ ಕಾರ್ಯಕರ್ತರೆಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಸೇರ್ಪಡೆ ಮಾಡಿಕೊಂಡಿರುವುದು ವಿಪರ್ಯಾಸ. ಈ ರೀತಿಯ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ತಿಳಿಸುತ್ತಿದೆ. ಎಂದು ಲೇವಡಿ ಮಾಡಿದರು.
“ಕಾರ್ಯಕರ್ತರಂದರೆ ಪಕ್ಷಕ್ಕೋಸ್ಕರ ನಿರಂತರವಾಗಿ ಶ್ರಮಿಸುವವರು. ಅಂತಹವರು ಯಾರೂ ಕಾಂಗ್ರೆಸ್‌ಗೆ ಸೇರ್ಪಡೆಯಾಗಿಲ್ಲ. ವಾಸ್ತವಕ್ಕೆ ವಿರುದ್ಧವಾಗಿ ಸುದ್ದಿ ಹರಡುವುದು ತಪ್ಪು” ಎಂದು ಅಶ್ವಥ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಸಾಕಷ್ಟು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುವ ವಿಶ್ವಾಸವಿದೆ. ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷವಾಗಿದ್ದು, ಬೂತ್ ಮಟ್ಟದಿಂದಲೇ ಪಕ್ಷವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.