ತಾಲೂಕಿನ 67ನೇ ಜಾತ್ರಾ ಮಹೋತ್ಸವ ಪುರಸಭೆಯ ಅವೈಜ್ಞಾನಿಕ ಯೋಜನೆ ಹಾಗೂ ಭ್ರಷ್ಟಾಚಾರಕ್ಕೆ ಹಿಡಿದ ಕೈ ಗನ್ನಡಿ. ಹಿರಿಯ ಪತ್ರಕರ್ತ ಸಾ.ಸು ವಿಶ್ವನಾಥ್
ಸಕಲೇಶಪುರ: ತಾಲೂಕಿನ 67 ನೇ ಜಾತ್ರಾ ಮಹೋತ್ಸವ ಪುರಸಭೆಯ ಅವೈಜ್ಞಾನಿಕ ಯೋಜನೆ ಹಾಗೂ ಭ್ರಷ್ಟಾಚಾರಕ್ಕೆ ಹಿಡಿದ ಕೈ ಗನ್ನಡಿಯಾಗಿದ್ದು ಈ ಸಂಬಂದ ಲೋಕಾಯುಕ್ತ ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಹಿರಿಯ ಪತ್ರಕರ್ತರಾದ ಸಾ .ಸು ವಿಶ್ವನಾಥ್ ಪುರಸಭೆಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಜಾತ್ರಾ ಮಹೋತ್ಸವ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲಕ್ಕೆ ಮುನ್ನುಡಿಯಾಗಿ ಇತಿಹಾಸ ನಿರ್ಮಿಸಿದೆ ಎಂದು ಆಪಾದಿಸಿದ್ದಾರೆ. ಸಾರ್ವಜನಿಕರ ಆರ್ಥಿಕತೆಯ ಅನುಕೂಲಕ್ಕೆ ತಕ್ಕಂತೆ ಜಾತ್ರೆ ನಡೆಯದೆ ಕೇವಲ ವಸ್ತುಪ್ರದರ್ಶನ ನಡೆಸಬೇಕು ಎನ್ನುವ ಮಟ್ಟಿಗೆ ಪ್ರದರ್ಶನ ಗೊಂಡು ಒಟ್ಟಾರೆ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ನೂತನ ಯೋಜನೆ ಯಾಗಿತ್ತು.
ಜಾತ್ರೆಯಲ್ಲಿ ತಿಂಡಿ ತಿನಿಸುಗಳ ಬೆಲೆ ನುಂಗಲಾರದ ಬೆಲೆಯಾಗಿ ಪರಿಣಮಿಸಿತ್ತು. ಇದಲ್ಲದೆ ಮನೋರಂಜನಾ ಪ್ರದರ್ಶನಗಳಿಗೂ ಅಧಿಕ ಹಣವನ್ನು ವಸೂಲು ಮಾಡಲಾಗಿದೆ. ಪ್ರತಿಯೊಂದು ತಾಲೂಕುಗಳಲ್ಲೂ ಜಾತ್ರೆ ಮಾಡುವಾಗ ಹರಾಜು ಮಾಡುವ ಮೊದಲು ಜಾತ್ರೆಯಲ್ಲಿನ ತಿಂಡಿ ತಿನುಸಗಳು ಹಾಗೂ ಮನೋರಂಜನಾ ಆಟಗಳಿಗೆ ದರ ನಿಗದಿ ಮಾಡಿ ನಂತರ ಹರಾಜು ಮಾಡಲಾಗುತ್ತದೆ. ಆದರೆ ಸಕಲೇಶಪುರ ಜಾತ್ರೆಯಲ್ಲಿ ಯಾವುದೆ ದರ ನಿಗದಿ ಮಾಡದೆ ಜಾತ್ರೆಯನ್ನು ನಡೆಸಲಾಯಿತು. ಇತ್ತೀಚೆಗೆ ನಮ್ಮ ಸಕಲೇಶಪುರ ಪತ್ರಕರ್ತ ಮಿತ್ರರೆಲ್ಲರೂ ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯಲ್ಲಿ ಸುತ್ತಾಡಿಕೊಂಡು ಬಂದಿದ್ದೆವು. ಅಲ್ಲಿನ ಪದಾರ್ಥಗಳು ಕೈಗೆಟುಕುವ ಬೆಲೆಗೆ ಅಂದರೆ ಜಾಯಿಂಟ್ ವೀಲ್‌ನ ದರ ಕೇವಲ 50- ರೂಪಾಯಿ, ಹಪ್ಪಳ-30 ರೂಪಾಯಿ, ಬೇಯಿಸಿದ ಜೋಳ -20 ರೂಪಾಯಿ, ಚರಮುರಿ -20 ರುಪಾಯಿಗಳಷ್ಟು ದರ ನಿಗದಿ ಮಾಡಿದ್ದರು. ಆದರೆ ನಮ್ಮೂರ ಹೆಮ್ಮಯ ಜಾತ್ರೆಯಲ್ಲಿ ಅದೇ ಜಾಯಿಂಟ್ ವೀಲ್ ದರ – 80 ರೂಪಾಯಿಗಳಷ್ಟು, ಹಪ್ಪಳ-50 ರೂಪಾಯಿಗಳಷ್ಟು, ಬೇಯಿಸಿದ ಜೋಳ – 50 ರೂಪಾಯಿ, ಚರಮುರಿ ಒಂದು ಬಟ್ಟಲಿಗೆ -60. ರೂಪಾಯಿಗಳಷ್ಟು ವಸೂಲಿ ಮಾಡಲಾಯಿತು. ಈ ಬಾರಿಯ ಜಾತ್ರಾ ಟೆಂಡರ್ ಆನ್‌ಲೈನ್ ಮುಖಾಂತರ ಪ್ರಕ್ರಿಯಗೊಂಡು 36 ಲಕ್ಷದ ಹತ್ತು ಸಾವಿರಕ್ಕೆ ಬಿಡ್‌ಡ್ ಆಗಿ ಜಿ ಎಸ್ ಟಿ ಸೇರಿ ಒಟ್ಟು 42 ಲಕ್ಷಕ್ಕೆ ಅಂತಿಮವಾಗಿತ್ತು. ಬಿಡ್‌ದಾರರು ಒಟ್ಟು ಮೊತ್ತವನ್ನು ಜಾತ್ರಾ ಮಹೋತ್ಸವಕ್ಕೆ ಬರುವ ಸಾರ್ವಜನಿಕರಿಂದಲೇ ತಾವು ಕಟ್ಟಿದ ಹಣವನ್ನು ಸರಿದೂಗಿಸುವ ಸಲುವಾಗಿ ವಸೂಲಿ ಮಾಡುವುದು ಅನಿವಾರ್ಯವಾಗಿ ಹೆಚ್ಚಿನ ದರ ನಿಗದಿ ಪಡಿದರು. ಪುರಸಭೆಯ ದೂರದೃಷ್ಟಿಯಿಲ್ಲದ ಪರಿಣಾಮ ಈ ರೀತಿಯ ಅವೈಜ್ಞಾನಿಕ ಜಾತ್ರೆ ನಡೆಯಲು ಕಾರಣವಾಗಿದೆ.. ಇನ್ನೂ ಜಾತ್ರೆಯು ಯಶಸ್ವಿಯಾಗಿ ನಡೆಸಲು ಮೂರು ಸಮಿತಿಗಳಾದ
ಕ್ರೀಡಾ ಸಮಿತಿ, ಪ್ರಚಾರ ಸಮಿತಿ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿಗಳನ್ನು ನೇಮಿಸಿದ್ದರೂ ಲೋಪದೋಷಗಳೇ ಎದ್ದು ಕಾಣುತ್ತಿದೆ. ಕ್ರೀಡಾ ಸ್ಪರ್ಧೆಗಳ ಟೆಂಡರ್ ಮಾಡುವ ಮೊದಲೆ ಯಾವ ರೀತಿ ಬಹುಮಾನಗಳನ್ನು ನೀಡಬೇಕು ಎಂಬುದನ್ನು ಮಾಹಿತಿ ನೀಡದೆ ಟೆಂಡರ್ ಮಾಡಲಾಯಿತು ಅಲ್ಲದೆ ಬಹುತೇಕ ಸ್ಪರ್ಧೆಗಳಲ್ಲಿ ತೃತೀಯಾ ಬಹುಮಾನ ನೀಡಲೆ ಇಲ್ಲ. . ಇನ್ನೂ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮವನ್ನು ಬೇಕಾಬಿಟ್ಟ ಮಾಡಲಾಯಿತು.ಯಾವ ದಿನಗಳಲ್ಲಿ ಯಾವ ಯಾವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು ಎನ್ನುವುದನ್ನು ಪುರಸಭೆ ವತಿಯಿಂದ ಟೆಂಡರ್ ದಾರರಿಗೆ ನಿರ್ದಿಷ್ಟವಾಗಿ ನಿರ್ದೇಶಿಸಿರುತ್ತಾರೆ. ಆದರೆ ಕೆಲವೆ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಗಿದ್ದು ಬಹಳಷ್ಟು ದಿನ ಯಾವುದೆ ಕಾರ್ಯಕ್ರಮಗಳನ್ನು ಮಾಡಲಾಗಿರುವುದಿಲ್ಲ. ಇದು ಪುರಸಭೆಯ ಗಮನಕ್ಕೆ ಬಂದರೂ ಜಾಣಮೌನಕ್ಕೆ ಜಾರಿದ್ದಾರೆ. ಒಟ್ಟಾರೆಯಾಗಿ ಭ್ರಷ್ಟಾಚಾರವೆಸಗಲು ಜಾತ್ರೆಯನ್ನು ಕೆಲವು ಪುರಸಭಾ ಸದಸ್ಯರುಗಳು ಹಾಗೂ ಅಧಿಕಾರಿಗಳು ಬಳಸಿಕೊಂಡಿದ್ದು ಪುರಸಭೆಯ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ದ ಮುಂದಿನ ದಿನಗಳಲ್ಲಿ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪುರಸಭೆಯ ಭ್ರಷ್ಟಾಚಾರ ಗಳನ್ನು ಬಯಲಿಗೆಳೆಯುವ ಕೆಲಸ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈ ಬೀಮ್ ಮಂಜು, ಮಲ್ನಾಡ್ ಮೆಹಬೂಬ್ ಇತರರು ಹಾಜರಿದ್ದರು.