ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ ಅಭಿಪ್ರಾಯ
ಸಕಲೇಶಪುರ : ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವದ್ಧಿ ಸಾಧ್ಯ ಎಂದು ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಬಾಳುಪೇಟೆ ಗ್ರಾಮದ ಸಿದ್ದಣ್ಣಯ್ಯ ಪ್ರೌಢಶಾಲೆಯ ಎರಡುವರೆ ಲಕ್ಷ ರೂ ವೆಚ್ಚದಲ್ಲಿ ದುರಸ್ತಿಗೊಂಡ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದ ಯುಗದಲ್ಲಿ ಜನರ ಜೀವನಮಟ್ಟ ಶಿಕ್ಷಣದಿಂದ ಮಾತ್ರ ಸುಧಾರಣೆಯಾಗುತ್ತದೆ. ಅದಕ್ಕೆ ತಕ್ಕಂತೆ ಕೆಳಹಂತದಿಂದಲೇ ಶಿಕ್ಷಣಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಗಳನ್ನು ಸಹ ಒದಗಿಸುವುದು ಸರ್ಕಾರದ ಕರ್ತವ್ಯವಾಗ ಬೇಕು ಎಂದರು.
ಬಡವರು, ಮಧ್ಯಮ ವರ್ಗ, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು ಕಲಿಯುವ ಸರ್ಕಾರಿ ಅನುದಾನಿತ ಶಾಲೆಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ನೀಡಲು ಸರ್ಕಾರ ಕಟಿ ಬದ್ಧವಾಗ ಬೇಕಿದೆ ಎಂದರು.
ನಾನು ಶಾಸಕನಾದ ಅವಧಿಯಲ್ಲಿ ಆದ್ಯತ ಮೇರೆಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಬಹುತೇಕ ಎಲ್ಲಾ ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ಅನುದಾನವನ್ನು ನೀಡಿದ್ದೇನೆ ಅದೇ ರೀತಿ ಮೂರು ವರ್ಷದ ಹಿಂದೆ ನನ್ನ ಶಾಸಕ ಅವಧಿಯಲ್ಲಿ ಸಿದ್ದಣ್ಣಯ್ಯ ಪ್ರೌಢಶಾಲೆಗೆ ಎರಡುವರೆ ಲಕ್ಷ ರೂಪಾಯಿಯನ್ನು ಕೊಠಡಿಗಳ ದುರಸ್ತಿಗೆ ನೀಡಿರುತ್ತೇನೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ನನ್ನನ್ನು ಇಂದು ಈ ಕೊಠಡಿ ಉದ್ಘಾಟನೆಗೆ ಕರೆದಿರುವುದು ನನಗೆ ಬಹಳ ಸಂತೋಷವಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದಣ್ಣಯ್ಯ ಪ್ರೌಢಶಾಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಂತರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸ್ವಾಮಿ, ಬಿಎ ಜಗನ್ನಾಥ್, ವೈ ಡಿ ಬಸಣ್ಣ, ದೇವರಾಜ್, ಸೇರಿದಂತೆ ಬಹುತೇಕ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಜರಿದ್ದರು