ನಾಗಮಂಗಲಕ್ಕೆ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು ಭೇಟಿ.
ಪೊಲೀಸರು ಹಾಗೂ ಗುಪ್ತಚರ ಇಲಾಖೆ ವಿರುದ್ಧ ಕಿಡಿ.
ಮಂಡ್ಯ :ಬುಧುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ್ದ ಕೋಮುಗಲಭೆಯಿಂದ ಹೊತ್ತಿ ಉರಿದಿದ್ದ ನಾಗಮಂಗಲಕ್ಕೆ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜುನಾಥ್ ಭೇಟಿ ನೀಡಿದರು.
ಶುಕ್ರವಾರ ಪಟ್ಟಣಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ ನಂತರ ಮಾತನಾಡಿದ ಸಿಮೆಂಟ್ ಮಂಜುನಾಥ್,ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಸ್ಥಳೀಯ ಪೊಲೀಸರ ಕರ್ತವ್ಯ ಲೋಪವೂ ಕಾರಣ ಎಂದು ದೂರಿದ ಅವರು ಪೊಲೀಸರು ನಿಜವಾದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಪಡಿಸಿದರು.ಕೇವಲ 100-150 ಜನ ಇದ್ದ ಮೆರವಣಿಗೆಗೆ ಸ್ಥಳೀಯ ಪೊಲೀಸರಿಗೆ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ. ಸ್ಥಳದಲ್ಲಿ ಗಲಾಟೆ ಆರಂಭವಾಗುವುದಕ್ಕೆ ಕೇವಲ ಹತ್ತು ನಿಮಿಷಗಳ ಮೊದಲು ಮೀಸಲು ಪೊಲೀಸ್ ಪಡೆಯನ್ನು ಬೇರೆಡೆಗೆ ಕಳಿಸಲಾಗಿದೆ. ಅಲ್ಲದೆ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿ ಸ್ಥಳದಲ್ಲಿಯೇ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಾದರೆ, ಈ ಇಬ್ಬರು ಅಧಿಕಾರಿಗಳು ಎಲಿದ್ದರು? ಮೀಸಲು ಪಡೆಯನ್ನು ಬೇರೆಡೆಗೆ ಕಳಿಸಿದ್ದು ಯಾಕೆ? ಎಂದು ಪ್ರಶ್ನಿಸಿದರು.
ಘಟನೆಯಿಂದ ಹಲವು ಜನರು ತಮ್ಮ ಜೀವನೋಪಾಯಕ್ಕೆ ಇದ್ದ ಅಸ್ತಿಪಾಸ್ತಿ ಕಳೆದುಕೊಂಡವರಿಗೆ ಸರ್ಕಾರವೇ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.