ಮನೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ಆಚಂಗಿ ಬಡಾವಣೆಯ ನಿವಾಸಿಗಳ ತುಂಡು ಜಾಗವನ್ನು ಕಂದಾಯ ಇಲಾಖೆ ಹಿಂಪಡೆಯಲು ಬಿಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಆಚಂಗಿ ಬಡಾವಣೆಯಲ್ಲಿ ಕಂದಾಯ ಇಲಾಖೆಯಿಂದ ಗೋಮಾಳ ಜಾಗವೆಂಬ ನೆಪ ಹೇಳಿ ಅಲ್ಲಿನ ನಿವಾಸಿಗಳನ್ನು ನೋಟಿಸ್ ನೀಡಿ ಒಕ್ಕಲೆಬ್ಬಿಸಲು ಮುಂದಾಗಿರುವುದರ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅಲ್ಲಿನ ನಿವಾಸಿಗಳನ್ನು ಭೇಟಿ ನೀಡಿ ಆಚಂಗಿ ಗ್ರಾಮದ ಸರ್ವೆ ನಂ 8ರಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಸದರಿ ಜಾಗವು 1993ಕ್ಕೂ ಮುಂಚೆ ಹಲಸುಲಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿದ್ದು ಇದಾದ ನಂತರ ಪುರಸಭೆಗೆ ಹಸ್ತಾಂತರವಾಗಿದೆ. ಸದರಿ ಜಾಗವು ಗೋಮಾಳವಾಗಿದ್ದು ಇದು ಪುರಸಭೆಗೆ ಹಸ್ತಾಂತರವಾಗಿದ್ದರು ಸಹ ಕಂದಾಯ ಇಲಾಖೆಯ ದಾಖಲಾತಿಗಳಲ್ಲಿ ಇನ್ನು ಗೋಮಾಳದ ಜಾಗ ಎಂದೆ ದಾಖಲಾಗಿದೆ. ಇದೀಗ ಕಂದಾಯ ಇಲಾಖೆಯವರು ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಗೋಮಾಳದ ಜಾಗ ಎಂದು ಇಲ್ಲಿನ ನಿವಾಸಿಗಳನ್ನು ನೋಟಿಸ್ ನೀಡಿ ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ, ನೂರಾರು ಎಕರೆ ಒತ್ತುವರಿ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳದವರು ಬಡವರ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ. ಯಾವುದೆ ಕಾರಣಕ್ಕೂ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಮೊದಲಿಗೆ ವಕೀಲರನ್ನು ಇಟ್ಟು ಬಡಾವಣೆಯ ನಿವಾಸಿಗಳ ಪರ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು.ಬಡಾವಣೆಯ ನಿವಾಸಿಗಳು ಯಾರು ಆತಂಕಕ್ಕೆ ಒಳಗಾಗುವುದು ಬೇಡ ನಿಮ್ಮ ಜೊತೆ ನಾನು ಸದಾ ಇರುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ಅಭಿಷೇಕ್, ಅಬ್ಬಾಸ್,ಕಣ್ಣನ್ ಮುಂತಾದವರು ಹಾಜರಿದ್ದರು.