ಸಕಲೇಶಪುರ : ರಾತ್ರಿ ಇಡೀ ಸುರಿದ ಮಳೆಗೆ ಶಾಲೆ ಕಟ್ಟಡ ಕುಸಿತ
ಸಕಲೇಶಪುರ : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿರುವ ಘಟನೆ ನಡೆದಿದೆ.
ತಾಲೂಕಿನ ಬೆಳಗೋಡು ಹೋಬಳಿ ಹೆಬ್ಬನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಗೋಡೆ ಕುಸಿದಿದ್ದು ರಾತ್ರಿ ನಡೆದ ಘಟನೆ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.
ಶಾಲೆಯ ಕಟ್ಟಡ ಸುಮಾರು 70 ವರ್ಷಗಳ ಹಳೆಯದಾಗಿದ್ದು, ಎಲ್ಲಾ ಕೊಠಡಿಯ ಗೋಡೆಗಳು ಬಿರುಕು ಬಿಟ್ಟಿದ್ದು ಯಾವ ಕ್ಷಣದಲ್ಲಾದರೂ ಬೀಳಬಹುದು. ಶಾಲೆಯ ಕೊಠಡಿಯ ಶಿಥಿಲ ವ್ಯವಸ್ಥೆಯ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದು, ಶಿಕ್ಷಣಾಧಿಕಾರಿಗಳು ಕೊಠಡಿಗಳನ್ನು ಕಟ್ಟಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.
ಆದರೆ 1ರಿಂದ 7ನೇ ತರಗತಿ ವರೆಗೆ ಶಾಲೆ ನಡೆಯುತ್ತಿದ್ದೂ 50 ಕ್ಕಿಂತ ಹೆಚ್ಚು ಮಕ್ಕಳು ಓದುತ್ತಿದ್ದೂ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಯಾವ ಕ್ಷಣದಲ್ಲಾದರೂ ಗೋಡೆಗಳು ಕುಸಿದು ಬೀಳುವ ಸಂಭವವಿದೆ. ಶಾಲಾ ಕಟ್ಟಡ ದುರಸ್ತಿಯಾಗುವವರೆಗೂ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಒಳಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ 5 ಕೊಠಡಿಯಿರುವ ಸುಸಜ್ಜಿತ ಶಾಲೆ ನಿರ್ಮಾಣ ಮಾಡಿಕೊಡಬೇಕೆಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೋಮಲೇಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಸಕ ಸಿಮೆಂಟ್ ಮಂಜು ರವರಿಗೆ ಮನವಿ ಮಾಡಿದ್ದಾರೆ.