ತಲಕಾವೇರಿ: ಜೀವನದಿ ಕಾವೇರಿ ಉಗಮ ಸ್ಥಾನ ಬ್ರಹ್ಮಕುಂಡಿಕೆಯಲ್ಲಿ ಸೋಮವಾರ ರಾತ್ರಿ 7.22ಕ್ಕೆ ಭಕ್ತರ ನಂಬಿಕೆಯ ಪವಿತ್ರ ಕಾವೇರಿ ತೀರ್ಥೋದ್ಭವವಾಯಿತು. ಭಕ್ತರ ಜಯಘೊಷದ ನಡುವೆ ಕಾವೇರಿ ತೀರ್ಥ ರೂಪಿಣಿಯಾಗಿ ನಂಬಿದ ಭಕ್ತರಿಗೆ ದರ್ಶನ ನೀಡಿದಳು.
ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಸಂಜೆ 5.30 ಗಂಟೆಯಿಂದ ಪೂಜಾ ಕೈಂಕರ್ಯ ಆರಂಭವಾಯಿತು. ಮಹಾಸಂಕಲ್ಪ, ಸಹಸ್ರನಾಮ ಅರ್ಚನೆ, ಮಂಗಳಾರತಿ, ಮಹಾಪೂಜೆ ನಡೆಯಿತು. ನಾಡಿನ ಸರ್ವರೂ ನೆಮ್ಮದಿಯಿಂದ ಇರುವಂತೆ ತಾಯಿ ಕಾವೇರಿಯನ್ನು ಪ್ರಾರ್ಥಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಪವಿತ್ರ ಕಾವೇರಿ ತೀರ್ಥೋದ್ಭವದ ವೇಳೆ ಬ್ರಹ್ಮಕುಂಡಿಕೆ ಸನಿಹ ಇರುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ಕಾವೇರಿ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ತಾಯಿ ಕಾವೇರಿಯನ್ನು ಪ್ರಾರ್ಥಿಸಿರುವುದಾಗಿ ಹೇಳಿದರು.ಕೋಟ್ಯಂತರ ಜನರ ಬದುಕಿಗೆ ಕಾವೇರಿ ನದಿ ಕಾರಣವಾಗಿದೆ. ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ನದಿ ಹಲವು ಜಿಲ್ಲೆಯ ಜನರ ಬದುಕು ರೂಪಿಸಿದೆ. ತಾಯಿ ಕೃಪೆಯಿಂದ ಈ ಬಾರಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿಲ್ಲ. ಅದೇ ರೀತಿ ಪ್ರತಿವರ್ಷ ತಾಯಿ ಕೃಪೆ ಇರಲಿ ಎಂದರು.
ಸಹಸ್ರಾರು ಸಂಖ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆ- ತೊಡುಗೆಯೊಂದಿಗೆ ಆಗಮಿಸಿದ್ದ ಕೊಡವರ ಅಬ್ಬರ ಮುಗಿಲು ಮುಟ್ಟಿತು. ಕೊಡವರ ಕುಲದೇವಿ ಕಾವೇರಿ ಉಕ್ಕಿ ಬಾ ಎಂದು ಕೊಡವ ಭಾಷೆಯ ಘೊಷವಾಕ್ಯ ನಿರಂತರ ಮೊಳಗಿತು. ಭಾಗಮಂಡಲದಿಂದ ತಲಕಾವೇರಿ ಕ್ಷೇತ್ರದವರೆಗೂ 8 ಕಿಲೋ ಮೀಟರ್ ದೂರದವರೆಗೆ ಕೊಡವರು ಪಾದರಕ್ಷೆ ರಹಿತವಾಗಿ ಪಾದಯಾತ್ರೆ ಮೂಲಕ ಆಗಮಿಸಿದರು. ತಳಿಯತಕ್ಕಿ ಬೊಳಚ ಹಿಡಿದಿದ್ದ ಕೊಡವತಿಯರು ಕಾವೇರಿ ತಾಯಿ ಪರ ನಿರಂತರ ಘೊಷಣೆ ಕೂಗುವುದರ ಮೂಲಕ ಗಮನ ಸೆಳೆದರು