ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ತಾಲ್ಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ
ಸಕಲೇಶಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಸುವ ಮುಖಾಂತರ ಜನ ಸಾಮಾನ್ಯರಿಗೆ ಹೊರೆ ಹಾಕುತ್ತಿರುವುದು ಖಂಡನೀಯ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮುದ್ರಾಂಕ ಶುಲ್ಕ, ವಾಹನ ನೊಂದಣಿ ಶುಲ್ಕ ಹೆಚ್ಚಾಗಿದೆ. ಸಾರಿಗೆ ಬಸ್ ದರವೂ ಏರಿಕೆಯಾಗಲಿದೆ. ರಾಜ್ಯದ ಬೊಕ್ಕಸ ಭರ್ತಿ ಇದೆ ಎನ್ನುವ ಕಾಂಗ್ರೆಸ್ಸಿಗರು ದರ ಏರಿಕೆ ಯಾಕೆ ಮಾಡಬೇಕು.
ತೈಲ ಬೆಲೆ ಏರಿಕೆ ಜನಸಾಮಾನ್ಯರಿಗೆ ತುಂಬಾ ಹೊರೆಯಾಗಿದ್ದು ಆಡಳಿತ ನಡೆಸುವ ಸರಕಾರವು ತಾವು ತೆಗೆದುಕೊಳ್ಳುವ ನಿರ್ಧಾರ ಸರ್ಕಾರದ ಜನತೆಯ ಮೇಲಿನ ನಿರ್ಲಕ್ಷ್ಯ ಮನೋಭಾವ ತೋರುತ್ತದೆ.ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಸಹಜವಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಲಿದೆ. ಇದರಿಂದಾಗಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಇನ್ನೂ ದುಬಾರಿಯಾಗಲಿದೆ. ಇದರಿಂದ ಬಡವರು ಬದುಕು ದುಸ್ತರವಾಗಲಿದೆ. ಆದ್ದರಿಂದ ತೈಲ ಬೆಲೆ ಏರಿಕೆಯನ್ನು ಮಾಡದೆ ಮೊದಲಿನಂತೆ ಯಥಾ ಸ್ಥಿತಿ ಕಾಪಾಡಬೇಕು ಎಂದರು.
ನಿಕಟ ಪೂರ್ವ ಬಿಜೆಪಿ ಅದ್ಯಕ್ಷ ಮಂಜುನಾಥ್ ಸಂಘಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಅಧಿಕಾರಕ್ಕೆ ಬಂದು ಈಗ ಪೆಟ್ರೋಲ್ ,ಡಿಸೇಲ್ ಹಾಗೂ ಜನಸಾಮಾನ್ಯರು ಕುಡಿಯುವ ಮದ್ಯದ ಬೆಲೆಯನ್ನು ಹೆಚ್ಚಿಸಿ ಬಡಜನರಿಗೆ ವಂಚನೆ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಅಭಿವೃದ್ಧಿಯ ಕಡೆ ಗಮನ ಕೊಡದೆ ಕೇವಲ ತಮ್ಮ ಸ್ವಾರ್ಥದ ಗ್ಯಾರಂಟಿ ಯೋಜನೆಗಳನ್ನಷ್ಟೇ ಜಪಿಸುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಎತ್ತಿನ ಗಾಡಿ ಹಾಗೂ ಸೈಕಲ್ ಮೆರವಣಿಗೆ ಮಾಡಲಾಯಿತು. ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ಉಪವಿಭಗಾಧಿಕಾರಿ ಡಾ. ಶ್ರುತಿ ರವರಿಗೆ ಮನವಿ ಸಲ್ಲಿಸಲಾಯಿತು.
. ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆಯರಾದ ವನಜಾಕ್ಷಿ, ರೇಖಾ,ಪಕ್ಷದ ಮುಖಂಡರಾದ ರಾಜ್ ಕುಮಾರ್,ಹುರುಡಿ ಅರುಣ್ ಕುಮಾರ್, ಸುದೀಶ್ ಗೌಡ, ಕೊಲ್ಲಹಳ್ಳಿ ಬಾಲರಾಜ್, ಕೌಡಹಳ್ಳಿ ಲೋಹಿತ್, ಜಂಬರ್ಡಿ ಲೋಹಿತ್,ಕ್ಯಾನಹಳ್ಳಿ ವಾಸು,ರಘು ಗೌಡ,ಸಂದೇಶ್,ಆನಂದ್ ಲಿಯೋ ವ್ಯಾಸ್, ಚೇತನ, ಅಗ್ನಿ ಸೋಮು ಮುಂತಾದವರು ಹಾಜರಿದ್ದರು.